ರಾಯಚೂರು: ಸ್ನಾತಕೋತ್ತರ ಪದವಿ(ಪಿಜಿ) ವಿದ್ಯಾರ್ಥಿನಿಯೋರ್ವಳು ಕಟ್ಟಡದ ಮೇಲಿಂದ ಹಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ವಿಶ್ವವಿದ್ಯಾಲಯ ಆವರಣದಲ್ಲಿ ಇಂದು ನಡೆದಿದೆ.
ಕೆಮಿಸ್ಟ್ರಿ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ಮಹಡಿ ಮೇಲಿಂದ ಹಾರಿದ್ದು ಎಂದು ಗುರುತಿಸಲಾಗಿದೆ. ಕಳೆದ ಸೋಮವಾರದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಿದ್ದು, ಇಂದು ಕೂಡ ಬೆಳಗ್ಗೆ ಪರೀಕ್ಷೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿನಿ ನಕಲು ಮಾಡಿದ್ದ ಕಾರಣ ಪರೀಕ್ಷೆ ಪತ್ರಿಕೆಯನ್ನು ಪಡೆದು ಕೊಠಡಿಯಿಂದ ಹೊರ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಬಳಿಕ ಹೊರ ಬಂದ ವಿದ್ಯಾರ್ಥಿನಿ ವಿವಿ ಆವರಣದಲ್ಲಿ ಮಹಡಿಯೊಂದರ ಮೇಲೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಗಾಯಾಳು ವಿದ್ಯಾರ್ಥಿನಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ವಿವಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂಬಂಧ ರಾಯಚೂರು ವಿವಿಯ ಕುಲಪತಿ ಪ್ರೋ. ಹರಿಶ್ ರಾಮಸ್ವಾಮಿಯವರನ್ನ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಪರೀಕ್ಷೆಯಲ್ಲಿ ಕಾಪಿ ಚೀಟಿ ಮಾಡುವ ವೇಳೆ ಸಿಕ್ಕಿಬಿದ್ದವರ ಉತ್ತರ ಪತ್ರಿಕೆ ಪಡೆದು ಹೊರಹಾಕಲಾಗಿದೆ. ಇಂದು ಮೂರ್ನಾಲ್ಕು ವಿದ್ಯಾರ್ಥಿಗಳು ನಕಲು ಮಾಡುವ ವೇಳೆ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಹೊರ ಹಾಕಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ಮಹಡಿ ಮೇಲಿಂದ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.