ರಾಯಚೂರು: ತುಂಗಭದ್ರಾ ನದಿಯಲ್ಲಿ ನ. 20ರಿಂದ ಡಿ. 1ರವರೆಗೆ ಪುಷ್ಕರ ಬರಲಿದೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ತುಂಗಭದ್ರಾ ನದಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ 7 ಗಂಟೆಗೆ ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ನದಿಯಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ. ಶ್ರೀಮಠದಿಂದ ನದಿಯ ತೀರದವರೆಗೆ ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ಮೆರವಣಿಗೆ ನಡೆಸಿ ಸುಮಾರು 2 ಗಂಟೆಗಳ ಕಾಲ ಧಾರ್ಮಿಕ ವಿಧಿ - ವಿಧಾನ, ಪೂಜೆ-ಪುನಸ್ಕಾರಗಳು ನಡೆಯಲಿವೆ ಎಂದು ಶ್ರೀಮಠ ತಿಳಿಸಿದೆ.
12 ವರ್ಷಕ್ಕೆ ಒಂದು ಬಾರಿ ನದಿಯಲ್ಲಿ ಪುಷ್ಕರ ಬರಲಿದೆ. ಪುಷ್ಕರ ಸಂದರ್ಭದಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಬಹುದು. ಪಿಂಡ ಪ್ರದಾನ ಮಾಡಲಾಗುತ್ತದೆ. ಆದ್ರೆ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಅಲ್ಲಿನ ಸಾರ್ವಜನಿಕರಿಗೆ, ಭಕ್ತರಿಗೆ ಜಿಲ್ಲಾಡಳಿತ ನದಿಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಿದೆ. ನದಿಯ ಸ್ನಾನದ ಬದಲಾಗಿ ನದಿಯ ಪ್ರೋಕ್ಷಣೆ ಹಾಗೂ ನದಿಯ ತಟದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೂಜೆಗೆ ನಿಯಮಗಳನ್ನು ವಿಧಿಸಿ, ಹೆಚ್ಚು ಜನ ಸೇರದಂತೆ ಎಚ್ಚರಿಕೆ ನೀಡಲಾಗಿದೆ.
ರಾಯರ ಮಠ ತುಂಗಾ ತೀರದಲ್ಲಿರುವುದರಿಂದ ಮಂತ್ರಾಲಯದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್-19 ನಿಯಮಗಳನುಸಾರ ವ್ಯವಸ್ಥೆ ಕಲ್ಪಿಸಲಾಗಿದೆ. ಪುಷ್ಕರ ಹಿನ್ನೆಲೆಯಲ್ಲಿ ಇತ್ತೀಚೆಗೆ ನದಿಯಲ್ಲಿ ಸ್ನಾನಕ್ಕೆ ಕೆಲವು ಸ್ಥಳಗಳನ್ನು ಗುರುತಿಸಿ ಪೂರ್ವ ತಯಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದ್ರೆ ಇದೀಗ ಕೊರೊನಾ ಸೋಂಕಿನ ಭೀತಿಯಿಂದಾಗಿ ನದಿಯಲ್ಲಿನ ಸ್ನಾನಕ್ಕೆ ಅಲ್ಲಿಯ ಸ್ಥಳೀಯ ಆಡಳಿತ ನಿರ್ಬಂಧ ವಿಧಿಸಿದೆ. ಹೀಗಾಗಿ ಪುಷ್ಕರ ಗೊಂದಲ ಮೂಡಿಸಿದೆ.