ರಾಯಚೂರು: ಮಾನಸಿಕ ಅಸ್ವಸ್ಥೆಯಾಗಿರುವ ಹೆತ್ತ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ದೋತ್ರಬಂಡಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು 3ನೇ ತರಗತಿಯ ಓದುತ್ತಿದ್ದ ಶ್ರೀದೇವಿ ಎಂದು ಗುರುತಿಸಲಾಗಿದೆ. ತಾಯಿ ಲಲಿತಾ ಎಂಬ ಆರೋಪಿ ತನ್ನ ಮಗಳನ್ನು ತನ್ನ ಕೈಯಿಂದಲೇ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಮನೆಯ ಪಕ್ಕದಲ್ಲಿ ಇದ್ದ ನೀರಿನ ಸಂಪಿನೊಳಗೆ ಮುಳುಗಿಸಿ ಕೊಲೆ ಮಾಡಿರುವ ತಾಯಿ ಲಲಿತಾ ಘಟನೆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತಾಯಿ ಲಲಿತಾ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿಯ ವೇಳೆ ಮನೆಯಲ್ಲಿ ಮಲಗಿದ್ದ ಮಗಳನ್ನು ಎತ್ತುಕೊಂಡು ಹೋಗಿ ನೀರಿನ ಸಂಪಿನೊಳಗೆ ಮುಳುಗಿಸಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ತಾಯಿ ಲಲಿತಾ ಮೇಲೆ ಕೇಳಿ ಬಂದಿದೆ. ಘಟನೆ ಬಳಿಕ ಲಲಿತಾ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ಈ ಕೃತ್ಯವೆಸಗಿರುವುದರಿಂದ ಪತಿ ಸೇರಿದಂತೆ ಕುಟುಂಬಸ್ಥರಿಗೆ ಆಘಾತವಾಗಿದೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಮೃತ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:Israel Hamas hate crime: ಅಮೆರಿಕದಲ್ಲಿ ಆರು ವರ್ಷದ ಮಗುವಿಗೆ ಚಾಕುವಿನಿಂದ ಇರಿದು ಕೊಲೆ.. ಬಾಲಕನ ತಾಯಿ ಮೇಲೂ ಹಲ್ಲೆ ಮಾಡಿದ ವೃದ್ಧ
ಪ್ರತ್ಯೇಕ ಘಟನೆ- ಟಿವಿ ರಿಮೋಟ್ಗಾಗಿ ಮಕ್ಕಳ ಮಧ್ಯೆ ಜಗಳ, ಹಿರಿಯ ಮಗ ಸಾವು:ಟಿವಿ ರಿಮೋಟ್ಗಾಗಿ ಇಬ್ಬರು ಮಕ್ಕಳು ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ತಂದೆ ಕತ್ತರಿ ಎಸೆದಿದ್ದರಿಂದ ಹಿರಿಯ ಮಗ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ. ಚಂದ್ರಶೇಖರ್ (16) ಮೃತ ಬಾಲಕ. ಲಕ್ಷ್ಮಣಬಾಬು ಕತ್ತರಿ ಎಸೆದ ತಂದೆ ಎಂದು ತಿಳಿದುಬಂದಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ತಂದೆ ಲಕ್ಷ್ಮಣಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಲಕ್ಷ್ಮಣಬಾಬು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಟಿವಿ ರಿಮೋಟ್ಗಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ತಂದೆ ಲಕ್ಷ್ಮಣಬಾಬು ಅವರು ಮಕ್ಕಳ ಗಲಾಟೆ ನೋಡಿ ಸಿಟ್ಟಿಗೆದ್ದು, ಹಿರಿಯ ಮಗನ ಮೇಲೆ ಕತ್ತರಿ ಎಸೆದಿದ್ದರು. ಇದರಿಂದಾಗಿ ಬಾಲಕನ ಕಿವಿಗೆ ಕತ್ತರಿ ತಗುಲಿ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಣಬಾಬು ಪಾರ್ಶ್ವವಾಯು ಪೀಡಿತರಾಗಿದ್ದು, ಮನೆಯಲ್ಲೇ ಇರುತ್ತಿದ್ದರು ಎಂದು ತಿಳಿದುಬಂದಿದೆ.