ಕೋಲಾಟದ ವೇಳೆ ಆರೋಗ್ಯ ಇಲಾಖೆ ಅಧಿಕಾರಿ ಕುಸಿದು ಬಿದ್ದು ಸಾವು ರಾಯಚೂರು: ಕೋಲಾಟ ನೃತ್ಯ ಮಾಡುವಾಗ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇಂದು ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮೊದಲಿಗೆ ರಾಷ್ಟ್ರಧ್ವಜಾರೋಹಣ ನಂತರದಲ್ಲಿ ಪಥಸಂಚಲನ ನಡೆಯಿತು. ಇದಾದ ನಂತರ ಆರಂಭವಾದ ಸಾಂಸ್ಖೃತಿಕ ಕಾರ್ಯಕ್ರಮದ ವೇಳೆ ಈ ದುರ್ಘಟನೆ ನಡೆದಿದೆ.
ಸಿಂಧನೂರು ಆರೋಗ್ಯ ಇಲಾಖೆಯ ಎಆರ್ಟಿ ಸೆಂಟರ್ನ ನರ್ಸಿಂಗ್ ಆಫೀಸರ್ ಮಹಾಂತೇಶ್ ಪೂಜಾರ್(38) ಕೋಲಾಟದಲ್ಲಿ ಭಾಗವಹಿಸಿ ನೃತ್ಯ ಮಾಡುತ್ತಿದ್ದರು. ಆದರೆ, ಕೋಲಾಟದ ವೇಳೆ ಇದ್ದಕ್ಕಿದ್ದಂತೆ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಭಯ ಶುರುವಾಗಿದೆ: ಪ್ರಧಾನಿ ನರೇಂದ್ರ ಮೋದಿಯನ್ನು ಕಂಡರೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಭಯ ಶುರುವಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಮಾತನಾಡಿದರು ನಗರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಅವರು ಬರುವುದರಿಂದ ಕರ್ನಾಟಕ ರಾಜ್ಯಕ್ಕೆ ಒಳ್ಳೆಯದು ಆಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಹೆಚ್ಚು ಅಭಿವೃದ್ಧಿ ಆಗುತ್ತೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್, ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ.
ಮೋದಿ ಬಗ್ಗೆ ಹೆಚ್ಡಿಕೆ ಮಾತನಾಡುವುದು ಸರಿಯಲ್ಲ. ಏಕೆಂದರೆ ಹೆಚ್ಡಿಕೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ಮೋದಿ ಬಂದ್ರೆ ಬಿಜೆಪಿ ಗೆಲುವು ನೂರಕ್ಕೆ ನೂರು ಸತ್ಯವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟೇ ಪ್ರಯತ್ನ ಮಾಡಲಿ. ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರುವುದು ಎಂದು ಸಚಿವರು ಭವಿಷ್ಯ ನುಡಿದರು.
ರಾಜ್ಯದಲ್ಲಿ ಸಿಡಿ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಅದು ಡಿಕೆಶಿ ಮತ್ತು ರಮೇಶ್ ಜಾರಕಿಹೊಳಿಯ ವೈಯಕ್ತಿಕ ವಿಚಾರ. ಈ ಹಿಂದೆ ಡಿಕೆಶಿ ಮತ್ತು ರಮೇಶ್ ಜಾರಕಿಹೊಳಿ ಒಂದೇ ಪಕ್ಷದಲ್ಲಿ ಇದ್ದವರು. ಸರ್ಕಾರ ಕೆಡವಿದ ಬಳಿಕ ಒಬ್ಬರಿಗೆ ಒಬ್ಬರಲ್ಲಿ ದ್ವೇಷ ಶುರುವಾಗಿದೆ. ಅವರ ಸಿಡಿ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕಾನೂನಾತ್ಮಕ ತನಿಖೆ ಒಪ್ಪಿಸಿದ್ರೆ ತನಿಖೆ ಆಗಬೇಕು ಎಂಬುವುದು ಜನರ ಅಭಿಪ್ರಾಯವಾಗಿದೆ.
ಮೋದಿ ಸ್ವಂತಕ್ಕಾಗಿ ಬದುಕುವ ವ್ಯಕ್ತಿಯಲ್ಲ: ಉತ್ತರ ಭಾರತಕ್ಕೆ ಮೋದಿ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮೋದಿ ಒಟ್ಟಿಗೆ ತೆಗೆದುಕೊಂಡು ಹೋಗಲು ಬಯಸಿದ್ದಾರೆ. ಇಡೀ ಭಾರತ ಒಂದಾಗಿ ತೆಗೆದುಕೊಂಡು ಹೊರಟ್ಟ ಒಬ್ಬ ಮಹಾನ್ ನಾಯಕ ಮೋದಿ. ಮೋದಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಭಾರತದಲ್ಲಿ ಹಲವು ರಾಜ್ಯಗಳು ಇವೆ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಅನುದಾನ ಕಡಿಮೆ ಮಾಡಿಲ್ಲ. ಮೋದಿ ಸ್ವಂತಕ್ಕಾಗಿ ಬದುಕುವ ವ್ಯಕ್ತಿಯಲ್ಲ. ದೇಶಕ್ಕಾಗಿ ಬದುಕುವ ಮಹಾನ್ ನಾಯಕ ಮೋದಿ. ಮೋದಿ ಹೆಸರು ಬಿಟ್ಟು ಮಾತನಾಡಿದ್ರೆ ಸ್ವಲ್ಪ ಓಟು ಬರಬಹುದು. ಮೋದಿಯವರ ಬಗ್ಗೆ ಮಾತನಾಡಿದ್ರೆ ಓಟು ಕಡಿಮೆ ಆಗಬಹುದು ಎಂದರು.
ರಾಷ್ಟ್ರಧ್ವಜಾರೋಹಣ:ಜಿಲ್ಲಾಡಳಿತದಿಂದ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಉಸ್ತುವರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಧ್ವಜಾರೋಹಣ ನೇರವೇರಿಸಿದರು. ಇದಾದ ನಂತರದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕದಳ, ಮಹಿಳೆ ಪೊಲೀಸ್, ಸ್ಕೌಟ್ ಆ್ಯಂಡ್ ಗೈಡ್, ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದಿದ್ದು, ಸಚಿವರ ಧ್ವಜವಂದನೆ ಸ್ವೀಕರಿಸಿದರು.
ಶಾಲಾ ಮಕ್ಕಳಿಂದ ದೇಶ ಭಕ್ತಿಗಳಿಗೆ ನೃತ್ಯ ಹಾಗೂ ಮಲ್ಲಗಂಬ ಪ್ರದರ್ಶನ ಸೇರಿದ ಜನರು ವಿಶೇಷವಾಗಿ ಗಮನ ಸೆಳೆಯಿತು.ಇನ್ನೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಡಾ.ಶಿವರಾಜ್ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಭಾಗವಹಿಸಿದರು.
ಓದಿ :ಮದ್ದೇಬಿಹಾಳ: ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮೃತದೇಹ ನದಿಯಲ್ಲಿ ಪತ್ತೆ