ರಾಯಚೂರು : ಅವರು ವಿದ್ಯಾರ್ಥಿಗಳಿಗೆ ಬೋಧಿಸುವ ಅತಿಥಿ ಉಪನ್ಯಾಸಕ ವೃತ್ತಿಯಿಂದ ಬರುವ ಹಣದಿಂದ ತನ್ನ ಬದುಕಿನ ಬಂಡಿ ಸಾಗಿಸುತ್ತಿದ್ದ. ಆದರೆ, ಕೊರೊನಾ ಭೀತಿಯಿಂದ ಶಾಲಾ-ಕಾಲೇಜುಗಳು ಬಂದ್ ಆಗಿದ್ದು, ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಸರ್ಕಾರ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವುದಾಗಿ ಭರವಸೆ ನೀಡಿದೆ. ಆದರೆ, ಭರವಸೆ ಇನ್ನೂ ಕಾರ್ಯರೂಪಕ್ಕೆ ಬರದ ಹಿನ್ನೆಲೆ ಅತಿಥಿ ಉಪನ್ಯಾಸಕ ಈಗ ಕುರಿ ಕಾಯುವ ಕೆಲಸದಲ್ಲಿ ತೊಡಗಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಪಾರಗಲು ಕುರಿಗಾಹಿಯಾದ ಅತಿಥಿ ಉಪನ್ಯಾಸಕ ಕುರಿಗಾಹಿಯಾಗಿರುವ ಈ ಅತಿಥಿ ಉಪನ್ಯಾಸಕನ ಹೆಸರು ವೀರನಗೌಡ. ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದವರು. ಎಂಎ, ಬಿಎಡ್ ಮುಗಿಸಿ ಮಸ್ಕಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ 9 ವರ್ಷಗಳಿಂದ ವೀರನಗೌಡ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಸದ್ಯ ಕೊರೊನಾ ಭೀತಿಯಿಂದ ಕಾಲೇಜು ಮುಚ್ಚಿರುವುದರಿಂದ ಉಪನ್ಯಾಸಕರಿಗೆ ಕೆಲಸವಿಲ್ಲದೆ ವೇತನವಿಲ್ಲದಂತಾಗಿದ್ದು, ಆರ್ಥಿಕ ಸಂಕಷ್ಟ ನಿವಾರಿಸಲು ಗ್ರಾಮದಲ್ಲಿ ಕುರಿ ಮೇಯಿಸುವ ಕೂಲಿ ಕೆಲಸ ಮಾಡುತ್ತಿದ್ದಾರೆ.
ವೀರನಗೌಡ ಅವರಿಗೆ ಮದುವೆಯಾಗಿದ್ದು, ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸರ್ಕಾರ ಭರವಸೆ ನೀಡಿರುವ ವೇತನ ನಂಬಿ ಕುಳಿತರೆ ಕುಟುಂಬ ಮುನ್ನಡೆಸಲು ಸಾಧ್ಯವಿಲ್ಲ ಎಂದು ಕುರಿ ಮೇಯಿಸುವ ಕೆಲಸದಲ್ಲಿ ತೊಡಗಿರುವ ಅವರಿಗೆ ಸಿಗುವ ಕೂಲಿ ದಿನಕ್ಕೆ 200 ರೂಪಾಯಿ. ಇದರಿಂದ ಸಂಸಾರ ಸಾಗಿಸುವುದು ಕಷ್ಟವೇ ಆಗಿದ್ದರೂ ಅವರ ಬಳಿ ಬೇರೆ ಉಪಾಯವಿಲ್ಲ.
ತಮ್ಮ ಸಮಸ್ಯೆ ಕುರಿತು ಮಾತನಾಡಿರುವ ವೀರನಗೌಡ, ಸರ್ಕಾರ ಶೀಘ್ರವೇ ಅಥಿತಿ ಉಪನ್ಯಾಸಕರಿಗೆ ವೇತನ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.