ರಾಯಚೂರು:ಲಾಕ್ಡೌನ್ನಿಂದಾಗಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದಂತೆ ಇದೀಗ ಬಾಲ ಕಾರ್ಮಿಕ ಪ್ರಕರಣಗಳೂ ಸಹ ಇಳಿಮುಖವಾಗಿವೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಇಂತಹ ಬಾಲ ಕಾರ್ಮಿಕರ ಕುರಿತು ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.
ಲಾಕ್ಡೌನ್ನಿಂದಾಗಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ!
ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಾಗಿರುವುದರಿಂದ ನಗರ ಭಾಗದಲ್ಲಿ ಮಾಲಿನ್ಯದ ಜೊತೆಗೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಈಗ ಬಾಲ ಕಾರ್ಮಿಕ ಪ್ರಕರಣಗಳಲ್ಲೂ ಗಣನೀಯ ಇಳಿಕೆಯಾಗಿದೆ ಎಂದು ರಾಯಚೂರು ಬಾಲ ಕಾರ್ಮಿಕ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಕಳೆದ 3 ವರ್ಷಗಳಿಂದ ಬಾಲ ಕಾರ್ಮಿಕ ನಿಷೇಧ ಕಾಯ್ದೆಯಡಿ ಜಿಲ್ಲೆಯ ವಿವಿಧೆಡೆ 21 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 2017 ಮಾರ್ಚ್-1, 2019 ಮಾರ್ಚ್, ಏಪ್ರಿಲ್, ಮೇ ಈ ಮೂರು ತಿಂಗಳಲ್ಲಿ 3 ಪ್ರಕರಣ ದಾಖಲಾಗಿವೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್ ತಿಂಗಳಲ್ಲಿ 3 ಪ್ರಕರಣ ದಾಖಲಾಗಿದ್ದು, ಏಪ್ರಿಲ್, ಮೇ(ಇಲ್ಲಿಯವರೆಗೆ) ಯಾವುದೇ ಪ್ರಕರಣ ದಾಖಲಾಗಿಲ್ಲ.
ಬೇಸಿಗೆ ಸಮಯದಲ್ಲಿ ಶಾಲೆಗಳಿಗೆ ರಜೆ ಇರುವಾಗ ಗ್ಯಾರೇಜ್, ಹೋಟೆಲ್, ಅಂಗಡಿ-ಮುಗಟ್ಟುಗಳಲ್ಲಿ ಕೆಲಸ ಮಾಡುವುದಕ್ಕೆ ತೆರಳುತ್ತಾರೆ. ಆದರೆ ಲಾಕ್ಡೌನ್ನಿಂದಾಗಿ ಬಂದ್ ಆಗಿರುವ ಪರಿಣಾಮ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಮಂಜುನಾಥ್ ರೆಡ್ಡಿ ಮಾಹಿತಿ ನೀಡಿದ್ದಾರೆ.