ರಾಯಚೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆ, ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಮೋದಿ ಪರ ಘೋಷಣೆ ಕೂಗಿ ಬಿಜೆಪಿ ನಾಯಕರ ಸಂಭ್ರಮಾಚರಣೆ
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಮೋದಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವನಗೌಡ, ಚುನಾವಣೆಗೂ ಮುನ್ನ ಹೇಳಿದ ಹಾಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಗದ್ದುಗೆ ಏರಲು ರೆಡಿಯಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದ್ದರೂ ಹೀನಾಯವಾಗಿ ಸೋತಿದೆ. ಅಲ್ಲದೇ ಏನೆಲ್ಲ ಮಾಡಿದರೂ ಮಂಡ್ಯದಲ್ಲಿ ಸಿ.ಎಂ ಪುತ್ರ ಸುಮಲತಾ ವಿರುದ್ಧ ಸೋತಿದ್ದು, ಅವಮಾನವಾಗಿ ಮಾನಸಿಕವಾಗಿ ಕುಗ್ಗಿರುವ ಸಿ.ಎಂ ಕುಮಾರಸ್ವಾಮಿ ಅವರು ಸೋಲಿನ ನೈತಿಕತೆ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜನಾದೇಶ ಪಡೆದಿದ್ದು ಇನ್ನೂ ಕೆಲವು ದಿನ ಮೈತ್ರಿ ಸರ್ಕಾರ ಪತನವಾಗಲಿದೆ ಎಂದ ಅವರು ನಮ್ಮ ಬೆಂಬಲಿತ ಸುಮಲತಾ ಅಂಬರೀಶ್ ಅವರು ಪಕ್ಷಕ್ಕೆ ಬರುವ ಕುರಿತು ರಾಜ್ಯ ನಾಯಕರು, ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.