ಲಿಂಗಸೂಗೂರು (ರಾಯಚೂರು):ಎಮ್ಮೆಯ ಜೀವ ಉಳಿಸಲು ಹೋಗಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ತಾಲೂಕಿನ ಆಶಿಹಾಳ ತಾಂಡದಲ್ಲಿ ಸಂಭವಿಸಿದೆ.
ಮೂಕ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಬಾಲಕ ತಂದೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಬಾಲಕ ಪ್ರಮೋದ್ ಕುಮಾರ್ (17) ಮನೆಯ ಬಳಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ ಬಳಿ ಮೇಯುತ್ತಿದ್ದ ಎಮ್ಮೆಯನ್ನು ಬೇರೆಡೆ ಓಡಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಎಮ್ಮೆ ಟ್ರಾನ್ಸ್ಫಾರ್ಮರ್ ಕಡೆ ಹೋಗಿ ಜೀವ ಕಳೆದುಕೊಳ್ಳುತ್ತದೆ ಎಂದು ಬಾಲಕ ಪ್ರಮೋದ್ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನ ತೆಗೆದುಕೊಂಡು ಎಮ್ಮೆ ಓಡಿಸಲು ಮುಂದಾಗಿದ್ದ. ಬಾಲಕನ ಕೈಯಲ್ಲಿದ್ದ ಕಟ್ಟಿಗೆ ಟ್ರಾನ್ಸ್‌ಫಾರ್ಮರ್‌ಗೆ ತಗುಲಿದ್ದು, ವಿದ್ಯುತ್ ಶಾಕ್ನಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.