ರಾಯಚೂರು: ಅಣ್ಣನ ಮದುವೆ ಹತ್ತಿರ ಬರುತ್ತಿದೆ ಸದ್ಯ ಕಾಲೇಜಿಗೆ ಹೋಗೋದು ಬೇಡ ಎಂದಿದ್ದಕ್ಕೆ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿನ ಎಂವಿಜಿ ಕಾಲೋನಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಶ್ರೇಯಾ(20) ಮೃತ ಯುವತಿ ಎಂದು ಗುರುತಿಸಲಾಗಿದೆ.
ಶ್ರೇಯಾಳ ಅಣ್ಣನ ವಿವಾಹ ಸಮಾರಂಭದ ದಿನಾಂಕ ಹತ್ತಿರವಾಗುತ್ತಿತ್ತು. ಹೀಗಾಗಿ ಮನೆಯಲ್ಲಿ ಕೆಲಸ ಕಾರ್ಯಗಳು ಇರುವುದರಿಂದ ಕಾಲೇಜಿಗೆ ಹೋಗೋದು ಬೇಡ ಎಂದು ತಾಯಿ ಮಗಳಿಗೆ ಹೇಳಿದ್ದಾಳೆ. ಆದರೆ ಈ ಮಾತಿನಿಂದ ನೊಂದ ಶ್ರೇಯಾ ರೆಡಿಯಾಗಲೆಂದು ಕೊಠಡಿಗೆ ಹೋಗಿ, ಹಲವು ಗಂಟೆಗಳು ಕಳೆದರೂ ಹೊರಗೆ ಬಾರದೇ ಇರುವುದರಿಂದ ಅನುಮಾನಗೊಂಡು, ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಕೊಂಡಿರುವುದು ತಿಳಿದು ಬಂದಿದೆ. ಘಟನೆ ವೇಳೆ ಕಟುಂಬ ಸದಸ್ಯರು ಮನೆಯಲ್ಲಿ ಇದ್ದೆವು ಎಂದು ಶ್ರೇಯಾಳ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಬಾಲಕ ಆತ್ಮಹತ್ಯೆ: ಅಪ್ರಾಪ್ತನ ಜೀವ ತೆಗೆದ ಟ್ರೋಲ್, ಟೀಕಿಸುವ ಮುನ್ನ ಒಮ್ಮೆ ಯೋಚಿಸಿ
ರನ್ನಿಂಗ್ ರೇಸ್ನಲ್ಲಿ ಸೋಲು, ವಿದ್ಯಾರ್ಥಿನಿ ಆತ್ಮಹತ್ಯೆ(ಪುತ್ತೂರು):ಇನ್ನೊಂದೆಡೆ,ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸೋಲು ಕಂಡು ಬಹುಮಾನ ಸಿಗದಿದ್ದಕ್ಕೆ ಖಿನ್ನತೆಗೊಳಗಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ನಿಶಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಬಿಹಾರದಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರನ್ನಿಂಗ್ ರೇಸ್ ಸ್ಪರ್ಧೆಯಲ್ಲಿ ನಿಶಾ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಅವರು ಸೋಲನುಭವಿಸಿದ್ದರು. ತಮಗೆ ಬಹುಮಾನ ಸಿಗಲಿಲ್ಲವೆಂದು ಬೇಸರಗೊಂಡಿದ್ದ ಅವರು ಬಳಿಕ ಖಿನ್ನತೆಗೊಳಗಾಗಿ, ಕೀಟನಾಶಕವನ್ನು ಸೇವಿಸಿದ್ದರು. ಇದರಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾ ಮಂಗಳೂರಿಗೆ ಕೊಂಡೊಯ್ಯುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸೂಚನೆ ಮೆರೆಗೆ ನಿಶಾಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಶಾ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ನಿಶ್ಚಿತಾರ್ಥದ ಉಂಗುರ ಕಳೆದು ಹೋದಕ್ಕೆ ಯುವಕ ಆತ್ಮಹತ್ಯೆ( ತುಮಕೂರು):ನಿಶ್ಚಿತಾರ್ಥದ ಉಂಗುರ ಕಳೆದು ಹೋಯ್ತು ಎಂದು ಮನನೊಂದ ಯುವಕನೊಬ್ಬನು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ಕಳೆದ ವಾರ ನಡೆದಿತ್ತು. ಕಮಲೇಶ್ (36) ಮೃತ ಯುವಕ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯೊಂದಿಗೆ ಕಮಲೇಶ್ನ ವಿವಾಹ ನಿಶ್ಚಿತಾರ್ಥ ಆಗಿತ್ತು. ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಶ್ಚಿತಾರ್ಥ ಉಂಗುರ ಕಳೆದು ಹೋಗಿತ್ತು. ಉಂಗುರು ಕಳೆದುಕೊಂಡ ವಿಚಾರ ಮನೆಯರ ಎದುರು ಹೇಳಲು ಹೆದರಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.