ಬಿಸಿಯೂಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ ರಾಯಚೂರು: ಜಿಲ್ಲೆಯ ಅಪ್ಪನದೊಡ್ಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಉಪ್ಪಿಟು ಸೇವಿಸಿ 70 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಮಕ್ಕಳಿಗೆ ನೀಡಲು ತಯಾರಾದ ಬಿಸಿಯೂಟದ ಉಪ್ಪಿಟ್ಟಿಗೆ ಹಲ್ಲಿಯೊಂದು ಬಿದ್ದಿದ್ದು, ಮಕ್ಕಳು ಈ ಉಪ್ಪಿಟ್ಟನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ಈ ಘಟನೆಗೆ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಘಟನೆ ಮಾಹಿತಿ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆ ಬಳಿಯೇ ಆರೋಗ್ಯ ತಪಾಸಣೆ ಮಾಡಿಸಿ 30 ಮಕ್ಕಳನ್ನು ಯಪಲದಿನ್ನಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಾಗೆ ಕೆಲ ಮಕ್ಕಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಉಳಿದ ಮಕ್ಕಳಿಗೆ ಶಾಲೆ ಬಳಿಯೇ ಚಿಕಿತ್ಸೆ ನೀಡಲಾಗಿದೆ.
ಶಾಲೆಗೆ ದೌಡಾಯಿಸಿದ ಪೋಷಕರು: ಮಕ್ಕಳು ಅಸ್ವಸ್ಥಗೊಂಡ ವಿಚಾರ ತಿಳಿದ ಕೂಡಲೇನೂರಾರು ಪೋಷಕರು ಶಾಲೆ ಬಳಿ ಜಮಾಯಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು ಹಾಗೂ ತಂಡ ಶಾಲೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳನ್ನು ತಪಾಸಣೆ ಮಾಡಿರುವ ವೈದ್ಯರು ಸದ್ಯ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಸದ್ಯ ಅಪ್ಪನದೊಡ್ಡಿ ಗ್ರಾಮದ ಶಾಲೆಯ ಬಳಿಯೇ ವೈದ್ಯರ ತಂಡ ಬೀಡುಬಿಟ್ಟಿದೆ.
ಅಡುಗೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: 'ಮಧ್ಯಾಹ್ನದ ಬಿಸಿಯೂಟಕ್ಕಾಗಿ ಉಪ್ಪಿಟ್ಟು ಮಾಡಲಾಗಿದೆ. ಉಪ್ಪಿಟ್ಟಿನಲ್ಲಿ ಹಲ್ಲಿ ಬಿದ್ದಿದ್ದರೂ ಸಹ ಅಡುಗೆಯವರು ಮಕ್ಕಳಿಗೆ ತಿನ್ನಲು ನೀಡಿದ್ದಾರೆ. ಉಪ್ಪಿಟ್ಟಿನಲ್ಲಿ ಹಲ್ಲಿ ಕಂಡುಬಂದ ಬಗ್ಗೆ ಮಕ್ಕಳು ಹೇಳಿದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಹಲ್ಲಿ ಬಿದ್ದಿರುವುದು ಹಾಗೂ ಸ್ವಚ್ಚತೆ ಕಾಪಾಡದೆ ಇರುವುದರಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಶಾಲೆಯ ಶಿಕ್ಷಕರು, ಅಡುಗೆಯ ಸಿಬ್ಬಂದಿಯ ನಿರ್ಲಕ್ಷ್ಯತನವೇ ಘಟನೆಗೆ ಕಾರಣವಾಗಿದೆ. ಉಪ್ಪಿಟ್ಟು ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ' ಎಂದು ಗ್ರಾಮಸ್ಥ ಜಯರಾಮ್ ಯಾದವ್ ಆರೋಪಿಸಿದ್ದಾರೆ.
'ಶಾಲೆಯಲ್ಲಿ 180 ವಿದ್ಯಾರ್ಥಿಗಳಿದ್ದು 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಲ್ಲಿ 123 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದರು. ಇನ್ನುಳಿದ 65 ವಿದ್ಯಾರ್ಥಿಗಳು ಸೇವಿಸಿರಲಿಲ್ಲ. ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಯಾಪಲದಿನ್ನಿ ಸರ್ಕಾರಿ ಆಸ್ಪತ್ರೆಯಲ್ಲಿ 30 ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯ ಬಳಿಯೇ ಆರೋಗ್ಯ ಅಧಿಕಾರಿಗಳು ಸಿಬ್ಬಂದಿ 30 ವಿದ್ಯಾರ್ಥಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದು, 45 ಬಾಲಕರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ' ಎಂದು ಗ್ರಾಮಸ್ಥ ಮಹೇಶ್ ಯಾದವ್ ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಪ್ರತಿಕ್ರಿಯೆ:ಈ ಬಗ್ಗೆ ದೂರವಾಣಿ ಮೂಲಕ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ''ಯಾವ ವಿದ್ಯಾರ್ಥಿಗಳು ಆರೋಗ್ಯದಲ್ಲಿಯೂ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. 30 ವಿದ್ಯಾರ್ಥಿಗಳು ಶಾಲೆಯ ಬಳಿ, ಯಾಪಲದಿನ್ನಿ ಸರ್ಕಾರಿ ಆಸ್ಪತ್ರೆಯಲ್ಲಿ 30 ವಿದ್ಯಾರ್ಥಿಗಳು ಚಿಕಿತ್ಸೆ ನೀಡಲಾಗುತ್ತಿದೆ. 45 ವಿದ್ಯಾರ್ಥಿಗಳನ್ನು ರಿಮ್ಸ್ ಆಸ್ಪತ್ರೆಗೆ ಪಾಲಕರು ಕರೆದುಕೊಂಡು ಹೋಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳೂ ಆರೋಗ್ಯವಾಗಿದ್ದಾರೆ'' ಎಂದು ತಿಳಿಸಿದ್ದಾರೆ.
ಶಾಸಕ ಬಸವನಗೌಡ ದದ್ದಲ್ ಭೇಟಿ:ವಿಚಾರ ತಿಳಿದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಅವರು ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆ ಕುರಿತಂತೆ ತಾಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಶಾಸಕರು, ''ಫೋಷಕರು ಯಾರೂ ಕೂಡ ಗಾಬರಿಪಡುವ ಅವಶ್ಯಕತೆ ಇಲ್ಲ. ಎಲ್ಲ ಮಕ್ಕಳ ಆರೋಗ್ಯ ಸಹಜ ಸ್ಥಿತಿಗೆ ಬಂದಿದೆ. ಭಯಪಡುವ ಅಗತ್ಯವಿಲ್ಲ'' ಎಂದರು. ಇದೇ ವೇಳೆ ಅಪ್ಪನದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಗೆ ಭೇಟಿ ನೀಡಿದ ಶಾಸಕರು, ಅಕ್ಕಿ, ಬೇಳೆ ಇತರ ಅಡುಗೆ ಸಾಮಾಗ್ರಿ ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದರು.
ಇದನ್ನೂ ಓದಿ:ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ