ರಾಯಚೂರು:ಹೈದರಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನಾಲ್ಕು ಜನ ಸೇರಿ ಒಟ್ಟು 7 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕೊರೊನಾ ಭೀತಿಯಿಂದ ಊರಿಗೆ ವಾಪಸ್ ಬುರುತ್ತಿದ್ದ ವೇಳೆ ಭೀಕರ ಅಪಘಾತ: 7 ಜನರ ದುರ್ಮರಣ - ರಾಯಚೂರಿನ ಕಾರ್ಮಿಕರು ಸಾವು
ಕೊರೊನಾ ಹರಡುವ ಭೀತಿ ಹಿನ್ನೆಲೆ ಸ್ವಗ್ರಾಮಕ್ಕೆ ವಾಪಸ್ ಆಗುವ ವೇಳೆ ಹೈದರಾಬಾದ್ ಬಳಿ ಜರುಗಿದ ಭೀಕರ ಅಪಘಾತದಲ್ಲಿ 7 ಮಂದಿ ಗುಳೆ ಹೋಗಿದ್ದ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಹೈದರಾಬಾದ್ ಬಳಿಯ ಶಂಶಾಬಾದ್ ಬಳಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನು ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ರಾಯದುರ್ಗ ಗ್ರಾಮದ ಶ್ರೀದೇವಿ (6), ರಂಗಪ್ಪ (25), ಶರಣಪ್ಪ (28), ಅಮರಪ್ಪ ಹಾಗೂ ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ಬಸಮ್ಮ, ಹನುಮಂತ ಹಾಗೂ ಬಾಗಲಕೋಟೆ ಜಿಲ್ಲೆಯ ಕಾಳಪ್ಪ ಮೃತಪಟ್ಟ ದುರ್ದೈವಿಗಳು ಎನ್ನಲಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಗುಳೆ ಹೋಗಿದ್ದ ಇವರು ಕೊರೊನಾ ಭೀತಿಯಿಂದ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಬೊಲೆರೋ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.