ರಾಯಚೂರು: ಕಲುಷಿತ ನೀರು ಸೇವನೆಯಿಂದ 60 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲುಷಿತ ನೀರು ಸೇವಿಸಿ ಜನರು ವಾಂತಿ ಮತ್ತು ಭೇದಿಯಿಂದ ಅಸ್ವಸ್ಥರಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
60 ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಈ ಗ್ರಾಮದಲ್ಲಿ ಸರಿಸುಮಾರು 3 ಸಾವಿರ ಜನರು ವಾಸವಿದ್ದಾರೆ. ಕಳೆದ ತಿಂಗಳ 31ನೇ ತಾರೀಖಿನಂದು ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡವರನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿತ್ತು. ಇದಾದ ನಂತರ ಈ ತಿಂಗಳ 4ನೇ ತಾರೀಖಿನಂದು ಕೆಲವರು ವಾಂತಿ ಮತ್ತು ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಬಳಿಕ 6ನೇ ತಾರೀಖಿನಿಂದ ನಿರಂತರವಾಗಿ ಪ್ರಕರಣ ಹೆಚ್ಚಾಗಿದೆ. ಈವರೆಗೆ ಸುಮಾರು 60 ಕ್ಕೂ ಹೆಚ್ಚು ಜನರು ಕಲುಷಿತ ನೀರು ಸೇವಿಸಿ ವಾಂತಿ ಮತ್ತು ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಮುಂಜಾಗ್ರತ ಕ್ರಮದ ಜೊತೆಗೆ ಅಗತ್ಯ ಕ್ರಮವನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ಲಿಂಗಸುಗೂರು ಟಿಎಚ್ಒ ಡಾ.ಅಮರೇಶ ಮಂಕಾಪುರ ತಿಳಿಸಿದ್ದಾರೆ.
ಇದನ್ನೂ ಓದಿ:ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ಮೂವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
ಕಲುಷಿತ ನೀರು ಸೇವನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಪೂರೈಕೆಗೊಂಡಿರುವ ನೀರು ಕುಡಿಯಲು ಯೋಗ್ಯವಿರಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇನ್ನು ಗ್ರಾಮದಲ್ಲಿ ಪೂರೈಕೆ ಆಗಿರುವ ಕಲುಷಿತಗೊಂಡಿರುವ ಪರಿಣಾಮದಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮ ಪಂಚಾಯತ್ ಆಡಳಿತ ಗ್ರಾಮದಲ್ಲಿ ಸ್ವಚ್ಚತೆ ಕೈಗೊಳ್ಳದೇ ಇರುವುದು, ನೀರು ಸರಬರಾಜು ಮಾಡುವ ಪೈಪ್ ಲೈನ್‌ಗಳನ್ನು ನಿರ್ವಹಿಸುವುದರಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಇಂತಹ ಘಟನೆ ಸಂಭವಿಸಿದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಅಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಿಡಿಒ ಹೇಳಿದ್ದೇನು?: ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, "ನಮ್ಮ ಇಲಾಖೆ ಕೆಲಸ ಮಾಡಿದ್ದಷ್ಟು ಯಾರು ಕೆಲಸ ಮಾಡಿಲ್ಲ. ಗ್ರಾಮಕ್ಕೆ ರಸ್ತೆ ಮಾಡಿಸುವುದು ಮಾತ್ರವಲ್ಲದೇ, ನಾವು ಹೊಲಕ್ಕೆ ದಾರಿ ಹಾಕಿ ಕೊಟ್ಟಿದ್ದೇವೆ. ಬೀದಿ ದೀಪ ಹಾಕಿಸಿದ್ದೇವೆ. ಈ ರೀತಿ ಅನೇಕ ಕೆಲಸಗಳನ್ನು ನಾವು ಮಾಡಿದ್ದೇವೆ. ನಾವು ಬೇಜವಾಬ್ದಾರಿತನದಿಂದ ಯಾವುದೇ ಕೆಲಸ ಮಾಡಿಲ್ಲ. ಈಗ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ನಾನು ಕೂಡ ಆಸ್ಪತ್ರೆಗೆ ತೆರಳಿ ವಿಚಾರಿಸಿ ಬಂದಿದ್ದೇನೆ. ಅವರ ಸ್ಥಿತಿ ಕಂಡು ನನಗೂ ಕೂಡ ದುಃಖವಾಗಿದೆ. ನಾವು ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆ" ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ವಿಜಯನಗರ: ಹಾಸ್ಟೆಲ್ ಚಿಕನ್ ಊಟ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ