ರಾಯಚೂರು: ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಯಚೂರು ಜಿಲ್ಲೆಯಲ್ಲಿ ಇದೀಗ ಕೊರೊನಾ ವಕ್ಕರಿಸಿದೆ. ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ ಆರು ಮಂದಿ ಕಾರ್ಮಿಕರಿಗೆ ಸೋಂಕು ತಗುಲಿರುವುದಾಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ದೃಢಪಡಿಸಿದ್ದಾರೆ.
ಗ್ರೀನ್ ಝೋನ್ಗೂ ಕಾಲಿಟ್ಟ ಕೊರೊನಾ: ರಾಯಚೂರಲ್ಲಿ 6 ಮಂದಿಗೆ ಸೋಂಕು ದೃಢ
ಮಹಾರಾಷ್ಟ್ರದ ಮುಂಬೈನಿಂದ ರಾಯಚೂರಿಗೆ ಆಗಮಿಸಿದ ಆರು ಮಂದಿ ಕಾರ್ಮಿಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಯಚೂರು ನಗರದ ಒಂದೇ ಕುಟುಂಬ ಮೂವರು, ಸುಲ್ತಾನಪುರ ಗ್ರಾಮದ ಒಬ್ಬರಿಗೆ, ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಆರು ಜನರು ಮೇ.11ರಂದು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಈ ಪೈಕಿ ನಾಲ್ವರನ್ನು ಯರಮರಸ್ ಕ್ಯಾಂಪ್ನ ಮೊರಾರ್ಜಿ ವಸತಿ ಶಾಲೆಯಲ್ಲಿ, ಮಸರಕಲ್ನ ಇಬ್ಬರನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 13ರಂದು ಈ ಆರು ಮಂದಿಯ ಗಂಟಲು ದ್ರವವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಮಾಹಿತಿಯನ್ನ ಸಂಗ್ರಹಿಸಲಾಗಿದ್ದು, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಇವುಗಳ ಸುತ್ತಲಿನ 7 ಕಿ.ಮೀ. ವ್ಯಾಪ್ತಿಯ ಪ್ರದೇಶಗಳನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇದುವರೆಗೆ ಗ್ರೀನ್ ಝೋನ್ ಆಗಿದ್ದ ರಾಯಚೂರು ಇದೀಗ ಆರೆಂಜ್ ಝೋನ್ ಆಗಿ ಬದಲಾಗಿದೆ ಎಂದು ಡಿಸಿ ತಿಳಿಸಿದರು.