ರಾಯಚೂರು:ಜಿಲ್ಲೆಯನ್ನ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಕೇಂದ್ರವೆಂದು ಗುರುತಿಸಲಾಗಿದೆ. ಇಲ್ಲಿನ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ಹಾರೋಬೂದಿ ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಇಂದು ಕೂಡಾ ನಡೆದಿದೆ.
ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್ಟಿಪಿಎಸ್) ಶೇ.40ರಷ್ಟು ವಿದ್ಯುತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸುವ ಹೆಗ್ಗಳಿಕೆ ಪಡೆದಿದೆ. ಆದ್ರೆ ಈ ಕೇಂದ್ರದಲ್ಲಿ ಈಗ ಅಕ್ರಮ ದಂಧೆ ನಡೆದಿದೆ ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ.
ವಿದ್ಯುತ್ ಉತ್ಪಾದನೆಯಿಂದ ಹೊರ ಬರುವ ಹಾರೋಬೂದಿಯನ್ನ ನಿಯಮಗಳ ಪ್ರಕಾರ ಅನುಮತಿಯೊಂದಿಗೆ ಸಾಗಿಸಬೇಕು. ಆದ್ರೆ 13 ಲಾರಿಗಳಲ್ಲಿ ಸಾಗಿಸುತ್ತಿದ್ದ ಲಾರಿಗಳ ಪೈಕಿ, 5 ಲಾರಿಗಳಲ್ಲಿ ಯಾವುದೇ ದಾಖಲೆಯಿಲ್ಲದೆ ರಾಜ್ಯ ಹಾಗೂ ಅಂತಾರಾಜ್ಯಕ್ಕೆ ಸಾಗಣಿಕೆ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಆರ್ಟಿಪಿಎಸ್ನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಶಂಕೆ ಮೂಡಿದೆ.
ಆರ್ಟಿಓ ಅಧಿಕಾರಿಯಿಂದ 5 ಲಾರಿ ಸೀಜ್ 5 ಲಾರಿಗಳು ಸೀಜ್...
ಹಾರೋಬೂದಿಯನ್ನ ಲಾರಿಯ ಟ್ಯಾಂಕರ್ ಮೂಲಕ ಸಾಗಣಿಸಬೇಕು. ಯಾಕೆಂದ್ರ ಈ ಬೂದಿ ಗಾಳಿಯಲ್ಲಿ ಹರಡಿದ್ರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೂ ದುಷ್ಪಾರಿಮ ಬೀರುತ್ತದೆ. ಆದ್ರೆ ಲಾರಿಗಳಲ್ಲಿ ಈ ಹಾರೋ ಬೂದಿಯನ್ನ ಸಾಗಿಸಲಾಗಿದೆ. ಅದರಲ್ಲಿ ಓವರ್ಲೋಡ್ ಹಾಕಿಕೊಂಡು ಲಾರಿಯಲ್ಲಿ ಬೂದಿಯನ್ನ ಕೊಂಡೊಯ್ಯುವುದನ್ನ ಗಮನಿಸಿದ ಸ್ಥಳೀಯ ಜೈ ಕರ್ನಾಟಕ ರಕ್ಷಣ ವೇದಿಕೆ ಸಂಘಟನೆ ಮುಖಂಡರು ಮತ್ತು ಸ್ಥಳೀಯರು ಲಾರಿ ನಿಲ್ಲಿಸಿ, ರಾಯಚೂರು ಸಾರಿಗೆ ಅಧಿಕಾರಿ(ಆರ್ಟಿಒ)ಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಸಾರಿಗೆ ಅಧಿಕಾರಿ 13 ಲಾರಿಗಳನ್ನ ತಪಾಸಣೆ ನಡೆಸಿದ್ದಾರೆ. 8 ಲಾರಿಗಳಲ್ಲಿ ನಿಯಮ ಪ್ರಕಾರವಾಗಿ ಲೋಡ್ ಮಾಡಲಾಗಿದ್ದು, ಸರಿಯಾದ ದಾಖಲೆಗಳೂ ಇವೆ. ಇನ್ನುಳಿದ 5 ಲಾರಿಗಳಲ್ಲಿ ಓವರ್ಲೋಡ್ ಪತ್ತೆಯಾಗಿದೆ. ಅಲ್ಲದೆ ಸರಿಯಾದ ದಾಖಲೆಗಳೂ ಇಲ್ಲ. ಹೀಗಾಗಿ ಲಾರಿ ಚಾಲಕರು ಕೂಡಾ ಪರಾರಿಯಾಗಿದ್ದಾರೆ.
ಇನ್ನು ಹಾರೋಬೂದಿಯಲ್ಲಿ ಅಕ್ರಮ ಸಾಗಣಿಕೆ ಕುರಿತಾಗಿ ಕೆಲ ದಿನಗಳ ಹಿಂದೆ ಅಧಿಕಾರಿಗಳನ್ನ ಅಮಾನತುಗೊಳಿಸಿದ್ದರೆ, ಇನ್ನು ಕೆಲವರನ್ನ ಆರ್ಟಿಪಿಎಸ್ ಘಟಕದಿಂದ ವೈಟಿಪಿಎಸ್ಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಆರ್ಟಿಪಿಎಸ್ನಲ್ಲಿ ಅಕ್ರಮ ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಾರೋಬೂದಿಯನ್ನ ಹಣದಾಸೆಗೆ ಬಾಯ್ಬಿಟ್ಟು ಆರ್ಟಿಪಿಎಸ್ನ ಕೆಲ ಅಧಿಕಾರಿಗಳು ಇಂತಹ ಅಕ್ರಮ ದಂಧೆಗಳನ್ನು ನಡೆಸಿದ್ದಾರೆ ಎನ್ನುವ ಶಂಕೆ ಮೂಡಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ನಷ್ಟ ತಪ್ಪಿಸಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕ ಒತ್ತಾಯವಾಗಿದೆ.