ರಾಯಚೂರು: ನಿನ್ನೆ ಮಧ್ಯರಾತ್ರಿ 4,20,750 ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯದಿಂದ 30 ಕ್ರಸ್ಟ್ ಗೇಟ್‌ಗಳ ಮೂಲಕ ಹೊರ ಬಿಡಲಾಗಿದ್ದು, ಪರಿಣಾಮ ಪ್ರವಾಹ ಭೀತಿ ಉಂಟಾಗಿದೆ.
ಪ್ರವಾಹ ಭೀತಿ: ನಾರಾಯಣಪುರ ಜಲಾಶಯದಿಂದ 4.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - ರಾಯಚೂರು ಪ್ರವಾಹ
ನಾರಾಯಣಪುರ ಜಲಾಶಯದಿಂದ 4.20 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರಿಂದ ಜಿಲ್ಲೆಯ ಅನೇಕ ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ.
ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ, ದೇವದುರ್ಗ ತಾಲೂಕಿನ ಹೂವಿನಹೆಡಗಿ, ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ಹಲವು ಸೇತುವೆಗಳು, ದೇವಾಲಯಗಳು ಜಲಾವೃತ್ತಗೊಂಡಿದ್ದು, ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ನಿನ್ನೆ 4 ಲಕ್ಷದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆದರೆ, ನಾರಾಯಣಪುರ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆಯಾದ ಪರಿಣಾಮ 4 ಲಕ್ಷದ 20 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಇದರಿಂದಾಗಿ ರೈತರ ಜಮೀನಿಗೆ ಮತ್ತಷ್ಟು ನೀರು ನುಗ್ಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮತ್ತು ನದಿ ತೀರಕ್ಕೆ ಜನ-ಜಾನುವಾರ ತೆರಳದಂತೆ ಡಂಗೂರ, ಮೈಕ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ.