ರಾಯಚೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಜಾರಿಗೆ ತಂದ 371 ಜೆ ಕಲಂ ಅನುಷ್ಠಾನಗೊಳಿಸಿದ್ದರೂ ಈ ಭಾಗದ ಅಭ್ಯರ್ಥಿಗಳಿಗೆ ಶೈಕ್ಷಣಿಕ, ಔದ್ಯೋಗಿಕ ವಲಯದಲ್ಲಿ ಮೀಸಲಾತಿ ದೊರೆಯುತ್ತಿಲ್ಲ ಎಂದು ಆರೋಪಿಸಿ ಈ ಭಾಗದ ಶಿಕ್ಷಣ, ಉದ್ಯೋಗ ಮೀಸಲಾತಿಗಾಗಿ ಹೋರಾಟ ಅಭಿಯಾನ ಮಾಡಲಾಗುವುದು ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆ, ಹೈ.ಕ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಅಂಬಲಗಿ ತಿಳಿಸಿದರು.
371 ಜೆ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕ, ಉಪನ್ಯಾಸಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. 371ರ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಕ್ಕೆ ಹಣ ಬಿಡುಗಡೆ ಮಾಡಬೇಕು. ಈ ಭಾಗದ ಪ್ರಾಥಮಿಕ, ಪ್ರೌಢ ಶಾಲಾ, ಪದವಿ ಪೂರ್ವ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.