ರಾಯಚೂರು:ಮಂತ್ರಾಲಯದ ಗುರುಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಯ 349ನೇ ಸಪ್ತ ರಥೋತ್ಸವ ಹಿನ್ನಲೆಯಲ್ಲಿ ರಾಯರ ಮಧ್ಯಾರಾಧನೆ ನಡೆಸಲಾಯಿತು.
ಬೆಳಗ್ಗೆಯಿಂದ ಶ್ರೀ ಉತ್ತರಾಯಣ ಪಾದಪೂಜೆ ಜರುಗಿತು. ಬಳಿಕ ತಿರುಪತಿ ತಿರುಮಲ ದೇವಾಲಯದಿಂದ ತಂದ ಶೇಷ ವಸ್ತ್ರವನ್ನ ಮಠದ ಸಂಪ್ರಾಯದಂತೆ ಬರಮಾಡಿಕೊಂಡು, ಶ್ರೀರಾಘವೇಂದ್ರ ಸ್ವಾಮಿಗಳಿಗೆ ಅರ್ಪಿಸಿದರು. ಇದಾದ ಬಳಿಕ ಪೀಠಾಧಿಪತಿ ಶ್ರೀಸುಬುದೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನೇರವೇರಿಸಿದರು. ಮಠದ ಪ್ರಖರದಲ್ಲಿ ರಥೋತ್ಸವ ನೇರವೇರಿಸಿ, ಪ್ರಹ್ಲಾದರಾಜರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಭಿಷೇಕದ ಬಳಿಕ ಮೂಲ ಬೃಂದಾವನಕ್ಕೆ ವಿವಿಧ ಹೂಗಳಿಂದ ಅಲಂಕರಿಸಿ, ಮಹಾಮಂಗಳಾರತಿ ಮಾಡಲಾಯಿತು. ಪೂಜೆ ಕಾರ್ಯಕ್ರಮದ ಬಳಿಕ ಶ್ರೀಮಠದ ಭಕ್ತರಿಗೆ ಆನ್ಲೈನ್ ಮೂಲಕ ಆಶೀರ್ವಚನ ನೀಡಲಾಯಿತು. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸದ ಹಿನ್ನಲೆಯಲ್ಲಿ ರಾಮದೇವರಿಗೆ ವಿಶೇಷ ದೀಪೋತ್ಸವ ನಡೆಸಿದರು.
ಗುರು ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವಕ್ಕೆ ಮಠದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರ್ಚಕರಿಗೆ ಅವಕಾಶವಿದ್ದು, ಭಕ್ತರಿಗೆ ಯುಟ್ಯೂಬ್ ಮೂಲಕ ನೋಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಬಾರಿ ವೈಭವದಿಂದ ನಡೆಯುತ್ತಿದ್ದ ಆರಾಧನಾ ಮಹೋತ್ಸವವನ್ನು ಕೋವಿಡ್-19 ಹಿನ್ನಲೆಯಲ್ಲಿ ಶ್ರೀಮಠದಿಂದ ಸರಳವಾಗಿ ನೆರವೇರಿಸಲಾಗುತ್ತಿದೆ.