ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಮಧ್ಯರಾಧನೆ ನಡೆಯುತ್ತಿದೆ.
ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಬೆಳಗ್ಗೆ 8 ಗಂಟೆಗೆ ರಾಯರ ಪಾದುಕೆ ಪೂಜೆ ನಡೆಯಿತು. ಈಗ ರಾಯರ ಮೂಲ ಬೃಂದಾವನಕ್ಕೆ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರಿಂದ ಪಂಚಾಮೃತ ಅಭಿಷೇಕ ನಡೆಯುತ್ತಿದೆ. ಇದಕ್ಕಾಗಿ ಶ್ರೀಮಠದಲ್ಲಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಶ್ರೀರಾಘವೇಂದ್ರ ಸ್ವಾಮಿ ಬೃಂದಾವನಸ್ಥರಾದ ಇಂದಿನ ದಿನ ಮಧ್ಯರಾಧನೆ ದಿನವಾಗಿ ಆಚರಿಸಲಾಗುವುದು. ಅಭಿಷೇಕದ ಬಳಿಕ ರಥೋತ್ಸವ ನಡೆಸಿ, ಮೂಲರಾಮ ದೇವರ ಪೂಜೆ ನಡೆಯಲಿದೆ. ತಿರುಮಲ ತಿರುಪತಿ ದೇವಾಲಯದಿಂದ ರಾಯರಿಗೆ ಶೇಷ ವಸ್ತ್ರ ಆಗಮನವಾಗಿದೆ. ಮಠದ ಸಂಪ್ರದಾಯದಂತೆ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಶೇಷ ವಸ್ತ್ರವನ್ನು ಬರಮಾಡಿಕೊಂಡರು. ಶೇಷ ವಸ್ತ್ರ ಸವೀಕರಿಸಿ ರಾಯರಿಗೆ ಅರ್ಪಿಸಲಾಯಿತು.
ಪ್ರತಿ ವರ್ಷ ರಾಯರ ಆರಾಧನೆ ಅತ್ಯಂತ ವೈಭವದಿಂದ ನಡೆಯುತ್ತಿತ್ತು. ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಭಕ್ತರಿಗೆ ಅವಕಾಶವಿಲ್ಲ.
ರಾಯರ ಆರಾಧನೆ ಮಹೋತ್ಸವವನ್ನ ನೋಡಲು ಮಂತ್ರಾಲಯದ ವಾಹಿನಿಯಲ್ಲಿ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ.