ರಾಯಚೂರು: ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಅತಿವೃಷ್ಟಿ ಮಳೆ ಹಾನಿಯು ರೈತರ ಬೆಳೆ, ರಸ್ತೆಗೆ ಸೀಮಿತವಾಗದೆ ಜಿಲ್ಲೆಯ 319 ಸರ್ಕಾರಿ ಶಾಲೆಗಳ 656 ಕೊಠಡಿಗಳಿಗೆ ಸಂಪೂರ್ಣ ಹಾನಿ ಸಂಭವಿಸಿದರೆ, 594 ಶಾಲೆಗಳ 1383 ಕೊಠಡಿಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶದಿಂದ ತಿಳಿದು ಬಂದಿದೆ.
ಸರ್ಕಾರಿ ಶಾಲೆಗಳ ಹಾನಿ ಬಗ್ಗೆ ವರದಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅತಿವೃಷ್ಟಿ ಮಳೆಯಿಂದ ಜಿಲ್ಲೆಯ 913 ಶಾಲೆಯ ಕಟ್ಟಡಗಳಲ್ಲಿ ಭಾಗಶಃ ಹಾನಿ, ಸಂಪೂರ್ಣ ಹಾನಿ ಸಂಭವಿಸಿದ್ದು, ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.
ದೇವದುರ್ಗ 21, ಲಿಂಗಸಗೂರು 73, ಮಾನ್ವಿ 153, ಸಿಂಧನೂರು 34, ರಾಯಚೂರು 38 ಒಟ್ಟು 319 ಶಾಲೆಗಳ 656 ಕೊಠಡಿಗಳಿಗೆ ಸಂಪೂರ್ಣ ಹಾನಿ ಸಂಭವಿಸಿದ್ದು, ದೇವದುರ್ಗ 40, ಲಿಂಗಸಗೂರು 124, ಮಾನ್ವಿ 178, ಸಿಂಧನೂರು 90, ರಾಯಚೂರು 162 ಒಟ್ಟು 594 ಶಾಲೆಗಳ 1383 ಕೊಠಡಿಗಳು ಭಾಗಶಃ ಹಾನಿಗೀಡಾಗಿವೆ.
ಕೊರೊನಾ ಹಿನ್ನೆಲೆ ಶಾಲೆಗಳು ಪುನರ್ ಆರಂಭಕ್ಕೆ ಪಾಲಕರು ಹಾಗೂ ಎಸ್ಡಿಎಂಸಿ ಸದಸ್ಯರು ಸಮ್ಮತಿಸಿದ್ದು, ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಶಾಲಾ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಸಾರ್ವಜನಿಕ ಶಿಕ್ಷಣ ಇಲಾಖೆ.
ಇನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಬಿ.ಎಚ್. ಗೋನಾಳ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳ ಹಾನಿ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಶಾಲೆಗಳು ಪುನರ್ ಆರಂಭದ ಕುರಿತು ಕೆಲ ದಿನಗಳ ಹಿಂದೆ ಎಸ್ ಡಿ ಎಂ ಸಿ ಅಧ್ಯಕ್ಷರ ವಿಡಿಯೋ ಸಂವಾದ ನಡೆದಿದ್ದು, ಎಲ್ಲರೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಆದ್ಯತೆಯ ಮೇರೆಗೆ ಶಾಲೆಗಳನ್ನು ಆರಂಭಿಸಲು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡು, ಸರ್ಕಾರದ ನಿರ್ದೇಶನಕ್ಕೆ ಕಾಯಲಾಗುತ್ತಿದೆ ಎಂದರು.