ಲಿಂಗಸುಗೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1,84,670 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿದ್ದು, ಶೀಲಹಳ್ಳಿ ಸೇತುವೆ ಮುಳುಗಿ ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಶುಕ್ರವಾರ ಬೆಳಗಿನಜಾವ ಅಣೆಕಟ್ಟೆ 1,80,000 ಕ್ಯೂಸೆಕ್ ಒಳ ಹರಿವು ಬರುತ್ತಿದೆ. ಹೀಗಾಗಿ ಅಣೆಕಟ್ಟೆ 492.252 ಮೀಟರ್ ಪೈಕಿ 491.33 ಮೀಟರ್ ಮಟ್ಟ ಕಾಯ್ದುಕೊಂಡು 9 ಕ್ರೆಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಬಿಡಲಾಗಿದೆ ಎಂದು ಕಿರಿಯ ಎಂಜಿನಿಯರ್ ವಿಜಯಕುಮಾರ ಅರಳಿ ತಿಳಿಸಿದ್ದಾರೆ.
ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಂದಿದ್ದರಿಂದ ನದಿ ಪಾತ್ರದ ರೈತರ ಜಮೀನುಗಳಿಗೆ ಅಲ್ಲಲ್ಲಿ ನೀರು ನುಗ್ಗಿದ್ದು, ಬೆಳೆಗಳು ಜಲಾವೃತವಾಗಿವೆ. ಪಂಪ್ಸೆಟ್ಗಳು ಕೊಚ್ಚಿ ಹೋಗಿದ್ದು ರೈತರು ಪರದಾಡುವಂತಾಗಿದೆ.
ಶೀಲಹಳ್ಳಿ ಹಂಚಿನಾಳ ಸೇತುವೆ ಭಾಗಶಃ ಮುಳುಗಡೆ ಅಗಿದ್ದರಿಂದ ಹಂಚಿನಾಳ, ಜಲದುರ್ಗ, ಯಳಗುಂದಿ, ಯರಗೋಡಿ, ಕಡದರಗಡ್ಡಿ ನಡುಗಡ್ಡೆ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ನಡುಗಡ್ಡೆ ಪ್ರದೇಶದ ಜನತೆ ಸರ್ಕಾರದ ಸಹಾಯ ಹಸ್ತಕ್ಕೆ ಕೈಚಾಚಿದ್ದಾರೆ.