ರಾಯಚೂರು: ಹೊಸ ವರ್ಷಾಚರಣೆ ಹಿನ್ನಲೆ ಆರೋಗ್ಯ ಕವಚ 108 ಆ್ಯಂಬ್ಯುಲೆನ್ಸ್ ಸಿಬ್ಬಂದಿ ಎರಡು ದಿನಗಳ ಕಾಲ ರಜೆ ರಹಿತ ಸೇವೆ ನೀಡಲು ಮುಂದಾಗಿದ್ದಾರೆ. ಜಿಲ್ಲೆಯ ಎಲ್ಲಾ ಆರೋಗ್ಯ ಕವಚ ಸಿಬ್ಬಂದಿ ಈ ನಿರ್ಣಯ ಕೈಗೊಂಡಿದ್ದಾರೆ.
ಡಿ.31 ಮತ್ತು ಜ. 1ರಂದು ಎರಡು ದಿನ ನಿರಂತರ ಸೇವೆ ಒದಗಿಸಲು 108 ಸಿಬ್ಬಂದಿ ನಿರ್ಧರಿಸಿದ್ದಾರೆ. ಹೊಸ ವರ್ಷ ಆಚರಿಸುವ ಸಂದರ್ಭದಲ್ಲಿ ಅಪಘಾತಗಳಿಂದ ಉಂಟಾಗುವ ಜೀವ ಹಾನಿ ತಡೆಯುವ ದೃಷ್ಟಿಯಿಂದ ಆರೋಗ್ಯ ಕವಚ ಸಿಬ್ಬಂದಿ ಈ ನಿರ್ಧಾರ ಕೈಗೊಂಡಿದ್ದಾರೆ. ಎರಡು ದಿನಗಳು ಜಿಲ್ಲೆಯ ಎಲ್ಲಾ ಸಿಬ್ಬಂದಿ ಸ್ವಇಚ್ಛೆಯಿಂದ ರಜೆ ರದ್ದುಗೊಳಿಸಿದ್ದು, ರಜೆ ರಹಿತ ಸೇವೆ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಆ್ಯಂಬುಲೆನ್ಸ್ ಸಿಬ್ಬಂದಿಯ ವಿಶೇಷ ಸೇವೆಯ ಕುರಿತು ಪ್ರಕಟನೆ ಓದಿ: ಹೊಸ ವರ್ಷ: ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಸುತ್ತೋಲೆ
ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಪ್ರತಿನಿತ್ಯ 5 ರಿಂದ 6 ರಸ್ತೆ ಅಪಘಾತಗಳು ನಡೆಯುತ್ತವೆ. ಹೊಸ ವರ್ಷಾಚರಣೆ ವೇಳೆ ವಾಹನ ಸವಾರರ ಅಜಾಗರೂಜಕತೆಯಿಂದ ಹೆಚ್ಚಿನ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ, ತುರ್ತು ಪರಿಸ್ಥಿತಿ ನಿರೀಕ್ಷಿಸುವ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ನಿಯೋಜಿಸಲಾಗುತ್ತಿದೆ.
ಎಲ್ಲಾ ಆ್ಯಂಬುಲೆನ್ಸ್ಗಳಲ್ಲಿ ಆಗತ್ಯ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲು ಯೋಚಿಸಲಾಗಿದೆ. ರಾಯಚೂರು ತಾಲೂಕಿನ ರಾಯಚೂರು, ಮಾವಿನಕೆರೆ, ಕಲ್ಮಲಾ, ಗುಂಜಳ್ಳಿ, ಮಠಮಾರಿ, ಶಕ್ತಿನಗರ. ದೇವದುರ್ಗ ತಾಲೂಕಿನ, ದೇವದುರ್ಗ ಅರಕೇರಾ, ಗಬ್ಬೂರು. ಮಾನ್ವಿ ತಾಲೂಕಿನ, ಮಾನ್ವಿ, ಸಿರವಾರ, ಕವಿತಾಳ, ಪೋತ್ನಾಳ. ಸಿಂಧನೂರು ತಾಲೂಕಿನ, ಸಿಂಧನೂರು, ಸಾಲುಗುಂದ, ತುರುವಿಹಾಳ, ಬಳಗಾನೂರು. ಲಿಂಗಸೂಗೂರು ತಾಲೂಕಿನ, ಲಿಂಗಸೂಗೂರು ಮುದುಗಲ್, ಮಸ್ಕಿ, ಗುರುಗುಂಟಾ ಗ್ರಾಮದ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್ಗಳು ಸೇವೆಗೆ ಸಜ್ಜಾಗಿವೆ. ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕದಳದೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ. 108 ಸಿಬ್ಬಂದಿಯ ಈ ಕ್ರಮ ಅವಘಡ ತಪ್ಪಿಸಲು ನೆರವಾಗಲಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23 ಆ್ಯಂಬುಲೆನ್ಸ್ ಸಿದ್ದ :ಜಿಲ್ಲೆಯಲ್ಲಿ 23 ಆ್ಯಂಬುಲೆನ್ಸ್ಗಳಿದ್ದು, 44 ನರ್ಸ್, 49 ಚಾಲಕರು ಇದ್ದಾರೆ. ಎಲ್ಲಾಆ್ಯಂಬುಲೆನ್ಸ್ಗಳಿಗೆ ಅಗತ್ಯ ತಜ್ಞ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು 108 ಕ್ಕೆ ಉಚಿತ ಕರೆ ಮಾಡಬಹುದಾಗಿದೆ. ಸಾವು-ನೋವು ಹಾಗೂ ಅನಾಹುತ ಮಾಹಿತಿಯನ್ನು ಪೊಲೀಸ್, ಅಗ್ನಿಶಾಮಕ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ.