ಈಟಿವಿ ಭಾರತ ಜೊತೆ ಮಾತನಾಡಿದ ಯದುವೀರ್ ಮೈಸೂರು :125 ವರ್ಷಇತಿಹಾಸವಿರುವ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ಮೃಗಾಲಯದೊಳಗೆ ಹೈಟೆಕ್ ಶಿಶು ಆರೈಕೆ ಕೇಂದ್ರವನ್ನು ತೆರೆಯಲಾಗಿದ್ದು, ಶಿಶು ಆರೈಕೆ ಕೇಂದ್ರವನ್ನು ಟೇಪ್ ಕತ್ತರಿಸುವ ಮೂಲಕ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಿಷಿಕಾ ಕುಮಾರಿ ಒಡೆಯರ್ ದಂಪತಿಗಳು ಉದ್ಘಾಟಿಸಿದರು. ಮೃಗಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಮೃಗಾಲಯಕ್ಕೆ ಪ್ರತಿವರ್ಷ 40 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶದಲ್ಲೇ ಉತ್ತಮ ಹಾಗೂ ಹಳೆಯ ಮೃಗಾಲಯ ಎಂಬ ಖ್ಯಾತಿ ಪಡೆದಿರುವ ಈ ಮೃಗಾಲಯದ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಿಶು ಆರೈಕೆ ಕೇಂದ್ರವನ್ನು ತೆರೆದಿದ್ದು, ಮೈಸೂರು ಅಮಿಟಿ 108 ಲೇಡೀಸ್ ಗ್ರೂಪ್ನ ಮೈಸೂರು ವಿಭಾಗದ ವತಿಯಿಂದ ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಮೈಸೂರು ಅಮಿಟಿ 108 ಲೇಡೀಸ್ ಗ್ರೂಪ್ನ ಚೇರ್ ಪರ್ಸನ್ ಅಪರ್ಣಾ ರಂಗ ಪ್ರತಿಕ್ರಿಯೆ ಅಪರ್ಣ ರಂಗ ಪ್ರತಿಕ್ರಿಯೆ :ಮೃಗಾಲಯದಲ್ಲಿ ಶಿಶು ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿದ ಮೈಸೂರು ಅಮಿಟಿ 108 ಲೇಡೀಸ್ ಗ್ರೂಪ್ನ ಚೇರ್ ಪರ್ಸನ್ ಅಪರ್ಣಾ ರಂಗ ಮಾತನಾಡಿ, ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಒಂದು ವರ್ಷದಲ್ಲಿ ಬರುತ್ತಾರೆ. ಅವರಿಗೆ ಇಲ್ಲಿ ಈ ಹಿಂದೆ ಮೂರು ಹಳೆಯ ಕೇಂದ್ರಗಳಿದ್ದು, ಅವುಗಳಲ್ಲಿ ಯಾವುದೇ ಒಳ್ಳೆಯ ಸೌಲಭ್ಯಗಳು ಇರಲಿಲ್ಲ. ಆದ್ದರಿಂದ ಒಂದು ಒಳ್ಳೆಯ ಚೈಲ್ಡ್ ಕೇರ್ ಸೆಂಟರ್ ಅನ್ನು ಮೃಗಾಲಯದಲ್ಲಿ ಕಟ್ಟಬೇಕೆಂದು ಇಲ್ಲಿನ ಅಧಿಕಾರಿಗಳನ್ನು ಕೇಳಿದ್ದೆವು.
ಇದಕ್ಕೆ ಅವರು ಸಂತೋಷದಿಂದ ಒಪ್ಪಿ ಜಾಗ ಕೊಟ್ಟಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಹೈಟೆಕ್ ಶಿಶುವಿನ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿದ್ದೇವೆ. ಇಲ್ಲಿ ಪ್ರವಾಸಕ್ಕೆ ಬರುವ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು, ಡೈಪರ್ ಚೇಂಜ್ ಮಾಡಲು ಅನುಕೂಲ ಆಗಲಿದೆ. ಈ ರೀತಿ ಹೈಟೆಕ್ ಶಿಶು ಆರೈಕೆ ಕೇಂದ್ರ ನಿರ್ಮಾಣ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಈಟಿವಿ ಜೊತೆ ಮಾತನಾಡಿದ ಯದುವೀರ್, ಮೃಗಾಲಯದಲ್ಲಿ ಶಿಶು ಆರೈಕೆ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿನೂತನ ಪ್ರಯತ್ನ ಇದಾಗಿದೆ. ಪ್ರವಾಸಿಗರಿಗೆ ಖಂಡಿತ ಅನುಕೂಲ ಆಗುತ್ತದೆ. ಮೈಸೂರಿಗೆ ಅರಮನೆಯನ್ನು ಬಿಟ್ಟರೆ ಅತಿ ಹೆಚ್ಚು ಪ್ರವಾಸಿಗರು ಬರುವ ಎರಡನೇ ಸ್ಥಳ ಮೃಗಾಲಯ. ಇಲ್ಲಿ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಒದಗಿಸುವುದು ಮುಖ್ಯವಾಗಿದೆ. ಇದರ ಜೊತೆಗೆ ಮೃಗಾಲಯದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿದರೆ ದೇಶದ ಹಳೆಯ ಮೃಗಾಲಯ ಮೊದಲ ಸ್ಥಾನದಲ್ಲಿ ಇರುತ್ತದೆ ಎಂದರು.
ನಮ್ಮ ಪೂರ್ವಜರು ಸ್ಥಾಪನೆ ಮಾಡಿದ ಮೃಗಾಲಯದ ಜೊತೆಗೆ ನಮ್ಮ ಸಂಬಂಧ ಯಾವಾಗಲೂ ಇರುತ್ತದೆ. ಅತಿಹೆಚ್ಚು ಪ್ರವಾಸಿಗರು ಬರುವ ಮೃಗಾಲಯಕ್ಕೆ ಇನ್ನು ಅತಿಹೆಚ್ಚು ಸೌಲಭ್ಯಗಳನ್ನು ಒದಗಿಸಬೇಕು. ಮೈಸೂರಿಗೆ ಪ್ರವಾಸೋದ್ಯಮವೇ ಆರ್ಥಿಕ ಮೂಲ ಆಗಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಅವಶ್ಯಕತೆ ಆಗಿದೆ ಎಂದು ಹೇಳಿದರು. ಜೊತೆಗೆ ಮುಂಗಾರು ತಡವಾಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ಮಳೆ ಬರುತ್ತದೆ ಇನ್ನು ಆಷಾಢ ಶುರುವಾಗಿಲ್ಲ. ಆಗಲಿರುವ ಮಳೆ ಆಗಲಿದೆ, ಮುಂದೆ ನೋಡೋಣ ಎಂದು ಕೆಆರ್ಎಸ್ ನಲ್ಲಿ ಮಳೆಗಾಗಿ ಪೂಜೆ ಮಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಇದನ್ನೂ ಓದಿ :ಕೆ.ಆರ್.ಆಸ್ಪತ್ರೆಯಲ್ಲಿ 100 ಬೆಡ್‌ಗಳ ಡಯಾಲಿಸಿಸ್ ಸೆಂಟರ್ ತೆರೆಯುವ ಉದ್ದೇಶವಿದೆ: ಪ್ರತಾಪ್ ಸಿಂಹ