ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೆ.27ರಿಂದ ಅ.3ರವರೆಗೆ ಯುವ ದಸರಾ ನಡೆಯಲಿದ್ದು, ನಟ ಸುದೀಪ್ ಉದ್ಘಾಟನೆ ಮಾಡಲಿದ್ದಾರೆಂದು ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ತಿಳಿಸಿದರು.
ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 27ರಂದು ಸಂಜೆ 6ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ನಟ ಸುದೀಪ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಉದ್ಘಾಟನೆ ಬಳಿಕ ಶ್ರೀಧರ್ ಜೈನ್ ನೃತ್ಯ ತಂಡ, ರಘುಧೀಕ್ಷಿತ್ ಹಾಗೂ ಗಾಯಕಿ ಮಂಗ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
28ರಂದು ಅಪ್ಪು ನಮನ: ಯುವ ದಸರಾದ 2ನೇ ದಿನದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ಕುಮಾರ್ಗೆ ಗೌರವ ಸಲ್ಲಿಸಲಾಗುತ್ತಿದ್ದು, ಗಾಯಕರಾದ ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ ಗಾಯನದ ಮೂಲಕ ಅಪ್ಪು ಅವರಿಗೆ ನಮನ ಸಲ್ಲಿಸಲಿದ್ದಾರೆ. ಸೆ.29ರಂದು ಲೇಸರ್ ಶೋ, ಸಿಗ್ನೇಚರ್ ಗ್ರೂಪ್ ನೃತ್ಯ ತಂಡ, ಕನ್ನಿಕಾ ಕಪೂರ್ ಮತ್ತು ಅಸೆಂಟ್ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ. ಸೆ 30ರಂದು ಸ್ಯಾಂಡಲ್‍ವುಡ್ ನೈಟ್ ಇರಲಿದ್ದು, ಕನ್ನಡದ ನಟಿ ನಟಿಯರು ಭಾಗವಹಿಸಲಿದ್ದಾರೆ. ಚಿತ್ರೀಕರಣವಿರುವ ಕಾರಣ ಕೆಲ ಕಲಾವಿದರು ಬರುವುದು ನಿರ್ಧಾರವಾಗಿಲ್ಲ. ಎರಡು ಮೂರು ದಿನಗಳಲ್ಲಿ ಯವ್ಯಾವ ಕಲಾವಿದರು ಭಾಗವಹಿಸಲಿದ್ದಾರೆ ಎಂಬುದು ಅಂತಿಮವಾಗಲಿದೆ ಎಂದರು.