ಮೈಸೂರು : ಭಾನುವಾರ ರಾತ್ರಿ ನಗರದ ಲಲಿತಮಹಲ್ ಹೋಟೆಲ್ ಸಮೀಪದ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ 5ನೇ ಬೆಟಾಲಿಯನ್ನ ಇಬ್ಬರು ಕಾನ್ಸ್ಟೇಬಲ್ಗಳು ಸಾವಿಗೀಡಾಗಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲು ಬಡಾವಣೆ ನಿವಾಸಿ ಪಿ.ಮಹೇಶ್ (23) ಹಾಗೂ ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಮರನಾಥ ತಾಳಿಕೋಟೆ (24) ಮೃತಪಟ್ಟವರು.
ನಗರದ ಸಿದ್ದಾರ್ಥ ಬಡಾವಣೆ ಸಮೀಪದ ಫುಡ್ ಸ್ಟ್ರೀಟ್ ನಲ್ಲಿ ಊಟ ಸೇವಿಸಿದ ಬಳಿಕ ತಮ್ಮ ಪಲ್ಸರ್ ಬೈಕಿನಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ ಕೇಂದ್ರದತ್ತ ಇವರು ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ವಾಹನವೊಂದು ಇವರ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸುಮಾರು 10 ಮೀಟರ್ ದೂರ ಹೋಗಿ ಬಿದ್ದಿದ್ದರೆ, ಇಬ್ಬರೂ ಕಾನ್ಸ್ಟೇಬಲ್ಗಳು ಮೇಲೆಕ್ಕೆ ತೂರಿ ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದಾಗಿ ಇಬ್ಬರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಮತ್ತೊಂದೆಡೆ ಘಟನೆ ಬಳಿಕ ಅಪಘಾತ ಎಸಗಿದ ವಾಹನ ಸವಾರ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಷ್ಟರಲ್ಲಿ ಎಚ್ಚೆತ್ತುಕೊಂಡ ಸಾರ್ವಜನಿಕರು ಆತನ ವಾಹನ ಬೆಂಬತ್ತಿ ಆಲನಹಳ್ಳಿ ಸಮೀಪದ ರಿಂಗ್ ರಸ್ತೆ ಬಳಿ ವಾಹನಕ್ಕೆ ಅಡ್ಡಲಾಗಿ ನಿಂತು ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ವಿಚಾರ ತಿಳಿದ ತಕ್ಷಣವೇ ಸಿದ್ದಾರ್ಥನಗರ ಸಂಚಾರಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.