ಮೈಸೂರು: ಅಕ್ಕನ ಮದುವೆಗೆಂದು ಕಲ್ಯಾನ ಮಂಟಪಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ತಮ್ಮನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಬಳಿ ನಡೆದಿದೆ. ಮೃತನನ್ನು ಬನ್ನೂರು ಸಮೀಪದ ಮಲಿಯೂರು ಗ್ರಾಮದ ಶಿವು (24) ಎಂದು ಗುರುತಿಸಲಾಗಿದೆ. ಬನ್ನೂರು ಬಳಿಯ ಹೆದ್ದಾರಿಯಲ್ಲಿ ಮೃತ ಶಿವು ಬೈಕ್ನಲ್ಲಿ ತೆರಳುವಾಗ ಎದುರುಗಡೆ ಬಂದ ಟ್ರ್ಯಾಕ್ಟರ್ ನಡುವೆ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ :ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ.. ಮನೆಗೆ ಆಧಾರವಾಗಿದ್ದ ವ್ಯಕ್ತಿ ನಡುಬೀದಿಯಲ್ಲಿ ಹೆಣವಾದ
ಇನ್ನು ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬನ್ನೂರು ಠಾಣಾ ಪೋಲಿಸರು ಆಗಮಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಟ್ರ್ಯಾಕ್ಟರ್ನ ಚಾಲಕ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದಾಗಿ ಮದುವೆ ಸಡಗರ ಸಂಭ್ರಮ ತುಂಬಿದ ಮನೆಯಲ್ಲಿ ದುಃಖ ಮಡುಗಟ್ಟಿದ್ದು, ಮದುವೆಯನ್ನು ಸರಳವಾಗಿ ಬೇಗ ಮುಗಿಸಿ ತಮ್ಮನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಮದುವೆ ಕಲ್ಯಾಣ ಮಂಟಪದಿಂದಲೇ ಬಂದಿದ್ದಾರೆ.
ಟ್ರ್ಯಾಕ್ಟರ್ ಬೈಕ್ ಮುಖಾಮುಖಿ - ಪಿಡಿಒ ಸಾವು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಭೀಕರವಾಗಿ ನಡೆದ ರಸ್ತೆ ಅಪಘಾತದಲ್ಲಿ ಪಿಡಿಓ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿತ್ತು. ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯಿತಿ ಪಿಡಿಒ ಸಾವನ್ನಪ್ಪಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನವರಾದ ಶಿವಾನಂದ ಬಸಪ್ಪ ಹಡಪದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ ಯರಿಕೊಪ್ಪ ಕ್ರಾಸ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ.