ಮೈಸೂರು : ಸಂವಿಧಾನದ ಮಹತ್ವ, ದೇಶ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ವೈಭವ ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರವಾದ ಯುವ ಸಂಭ್ರಮದಲ್ಲಿ ಮೇಳೈಸಿತು. ಅಂಬೇಡ್ಕರ್ ಅವರ ಹೋರಾಟದ ಬದುಕು, ಭಗತ್ ಸಿಂಗ್ ಹಾಗೂ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ಮೈಸೂರಿನ ಕೌಟಿಲ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಮೋಘ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.
ಕೊಡಗಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇಶಕ್ಕೆ ರಕ್ಷಾಕವಚವಾಗಿರುವ ಯೋಧರ ಸಾಹಸ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ಜೇಮ್ಸ್ ಚಿತ್ರದ ಸಲಾಂ ಸೋಲ್ಜರ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಯೋಧರ ತ್ಯಾಗವನ್ನು ಯುವ ಸಮೂಹಕ್ಕೆ ತಿಳಿಸಿದರು.
ಬೆಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಕನ್ನಡಿಗರ ಸಾಹಸ, ಶೌರ್ಯ ಹಾಗೂ ವೈಭವವನ್ನು ಸಿಂಹಾದ್ರಿಯ ಸಿಂಹ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರೆ, ರಾಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹಿಳಾ ಸಬಲೀಕರಣ ಸಂದೇಶ ಪ್ರದರ್ಶಿಸಿದರು.
ಬೆಂಗಳೂರಿನ ಶ್ರೀ ದಕ್ಷ ಅಕಾಡೆಮಿ ಹಾಗೂ ಬಳ್ಳಾರಿ ಎಸ್.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳ ಸಮೂಹವು ಚೆಲ್ಲಿದರೂ ಮಲ್ಲಿಗೆಯಾ ಹಾಗು ಜೋಗಿ ಚಿತ್ರದ ಹಾಡಿಗೆ ಕುಣಿಯುವುದರ ಮೂಲಕ ಕರ್ನಾಟಕದ ಜನಪದ ಪರಂಪರೆ ಹಾಗೂ ದೇಶೀಯ ಸಂಸ್ಕೃತಿಯನ್ನು ನೃತ್ಯದ ಮೂಲಕ ಹೇಳಿ ಯುವ ಸಮೂಹ ಕುಣಿಯುವಂತೆ ಮಾಡಿದರು.
ಹೊಳೆನರಸೀಪುರದ ಹೊಸ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರಮ್ಮ ಮತ್ತು ಮಾದಪ್ಪ ಬಗ್ಗೆ ಕಂಸಾಳೆ ನೃತ್ಯದ ಮೂಲಕ ರಂಜಿಸಿದರು. ಮೈಸೂರಿನ ಮಾತೃಮಂಡಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರಪೂಜಿತ ಗಣೇಶನನ್ನು ಸ್ಮರಣೆ ಮಾಡುತ್ತ ಅಗ್ನಿಪತ್ ಚಿತ್ರದ 'ದೇವಾ ಶ್ರೀ ಗಣೇಶ' ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು.
ಗುಂಡ್ಲುಪೇಟೆಯ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕೆಚ್ಚೆದೆಯ ಕನ್ನಡಿಗರ ಮಿಂಚಿನ ದಸರಾ ಸಂಭ್ರಮೋತ್ಸವವನ್ನು ಪಲ್ಲಕ್ಕಿ ಹಾಗೂ ವೀರಕನ್ನಡಿಗ ಚಿತ್ರದ ಹಾಡುಗಳಿಗೆ ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ತಮ್ಮ ಅಮೋಘ ನೃತ್ಯ ಮಾಡಿದರು.