ಮೈಸೂರು: ಪಾಲಿಕೆ ಕಚೇರಿ ಬಾಗಿಲ ಬಳಿ ನಿಂತು ಸಿಗರೇಟ್ ಸೇದಬೇಡ ಎಂದು ಹೇಳಿದ್ದಕ್ಕೆ ಕಂದಾಯ ಅಧಿಕಾರಿ ಮತ್ತು ಪಾಲಿಕೆ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಮೈಸೂರು ನಗರ ಪಾಲಿಕೆ ವಲಯ ಕಚೇರಿ 5ರಲ್ಲಿ ಬುಧವಾರ ನಡೆಯಿತು.
ಸಂಜೆ 4.30ರ ಸುಮಾರಿಗೆ ಧನುಷ್ ಎಂಬಾತ ಸಿಗರೇಟ್ ಸೇದುತ್ತಾ ನಿಂತಿದ್ದ. ಸರಕಾರಿ ಕಚೇರಿ ಹತ್ತಿರ ಸಿಗರೇಟ್ ಸೇದಬಾರದೆಂದು ಕಂದಾಯ ಅಧಿಕಾರಿ ನಂದಕುಮಾರ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಧನುಷ್, ನಂದಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಚೇರಿ ಒಳಗೆ ನುಗ್ಗಿ ಸಹೋದ್ಯೋಗಿಗಳ ಮುಂದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ. ಧನುಷ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.