ಮೈಸೂರು:ಮದುವೆಗೂ ಮುನ್ನ ವರದಕ್ಷಿಣೆಗೆ ಒತ್ತಾಯಿಸಿದ್ದರಿಂದ ಮನನೊಂದ ಊಟಿ ಮೂಲದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿ. ಕವೀಶ(21) ಆತ್ಮಹತ್ಯೆಗೆ ಶರಣಾದ ಯುವತಿ.
''ಪುತ್ರಿ ಕವೀಶ, ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಕಡೆಯ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿದ್ದರಿಂದ ಕಳೆದ ಸೆ.17 ರಂದು ನಿಶ್ಚಿತಾರ್ಥ ಕೂಡ ನೆರವೇರಿತ್ತು. ಇದರ ನಡುವೆ, ಕಿರಣ್ ತಾಯಿ ಮತ್ತು ಸೋದರ ಮಾವ ಚಿನ್ನಾಭರಣ ಮತ್ತು ಎಕ್ಸ್ಯುವಿ ಕಾರನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ವರದಕ್ಷಿಣೆ ನೀಡದಿದ್ದರೆ ಮದುವೆ ನಡೆಯುವುದಿಲ್ಲ ಎಂದು ಸಹ ತಿಳಿಸಿದ್ದರು. ಇದರಿಂದ ಮನನೊಂದ ಕವೀಶ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ'' ಎಂದು ಆರೋಪಿಸಿ ಮೃತ ಪುತ್ರಿಯ ತಂದೆಯು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ
ವಂಚನೆ ಪ್ರಕರಣ, ದೂರು ದಾಖಲು:ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿಬ್ಯಾಂಕ್ನಲ್ಲಿ ಮನೆ ಅಡವಿಟ್ಟು ಸಾಲ ಪಡೆದ ವ್ಯಕ್ತಿ ನಂತರ ಅದೇ ಮನೆಯನ್ನು ಬೇರೆಯವರಿಗೆ ಕ್ರಯ ಪತ್ರ ಮಾಡಿ ಹಣ ಪಡೆದು, ಬ್ಯಾಂಕಿಗೆ ಹಾಗೂ ಮನೆ ಕ್ರಯ ಮಾಡಿಕೊಂಡ ವ್ಯಕ್ತಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಎನ್ ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ನಗರದ ಎನ್ ಆರ್ ಮೊಹಲ್ಲಾದ ನಿವಾಸಿ ಮಹಮ್ಮದ್ ರಮೀಜ್ ವಂಚಿಸಿದ ಆರೋಪಿ.
ಏನಿದು ಪ್ರಕರಣ?:ಎನ್ ಆರ್ ಮೊಹಲ್ಲಾ ನಿವಾಸಿಯಾದ ಜಬೀವುಲ್ಲಾ ಎಂಬುವವರಿಗೆ ಸಿರಾಜುನ್ನಿಸಾ ಝಬೇರಾ ಎಂಬುವವರ ಮೂಲಕ ರಮೀಜ್ ಪರಿಚಯವಾಗಿದ್ದ. ಈ ವೇಳೆ, ಬೆಲವತ್ತ ಗ್ರಾಮದಲ್ಲಿರುವ ಮನೆಯನ್ನು ಮಾರಾಟ ಮಾಡುವುದಾಗಿ ಮಹಮ್ಮದ್ ರಮೀಜ್, ಜಬೀವುಲ್ಲಾಗೆ ತಿಳಿಸಿದ್ದ. ಜಬೀವುಲ್ಲಾ ಅವರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮನೆ ಖರೀದಿಗೆ ಮುಂದಾಗಿದ್ದರು. ರಮೀಜ್ ತನಗೆ ತುರ್ತಾಗಿ ಹಣ ಬೇಕು ಎಂದು 2020ರಲ್ಲಿ ಜಬೀವುಲ್ಲಾ ಅವರಿಂದ 29.50 ಲಕ್ಷ ರೂಪಾಯಿ ಪಡೆದು ನೋಟರಿ ಮೂಲಕ ಕ್ರಯ ಪತ್ರ ಮಾಡಿಕೊಟ್ಟಿದ್ದ. ಇನ್ನೊಂದು ವಾರದಲ್ಲಿ ನೋಂದಣಿ ಮಾಡಿಕೊಡುವುದಾಗಿ ತಿಳಿಸಿ, ಮನೆಯನ್ನು ಜಬೀವುಲ್ಲಾ ಸ್ವಾಧೀನಕ್ಕೆ ನೀಡಿದ್ದ.
ನಂತರ ರಮೀಜ್ ನಾಪತ್ತೆಯಾಗಿದ್ದ. ಈ ಬಗ್ಗೆ ಸಿರಾಜುನ್ನಿಸಾ ಝಬೇರ್ ಅವರನ್ನು ಕೇಳಿದಾಗ ರಮೀಜ್ ದುಬೈಗೆ ತೆರಳಿರುವುದಾಗಿ ತಿಳಿಸಿದ್ದರು. ಇದರ ನಡುವೆ, ಖಾಸಗಿ ಬ್ಯಾಂಕ್ವೊಂದರ ಸಿಬ್ಬಂದಿ ಮನೆ ಬಳಿ ತೆರಳಿ ರಮೀಜ್ ಮನೆಯನ್ನು ನಮ್ಮ ಬ್ಯಾಂಕ್ನಲ್ಲಿ ಅಡವಿಟ್ಟಿದ್ದು, ಸಾಲ ಮರುಪಾವತಿ ಆಗದ ಕಾರಣ ಸ್ವಾಧೀನ ಪಡಿಸಿಕೊಳ್ಳುವುದಾಗಿ ತಿಳಿಸಿದ್ದರು. ನಂತರ ಬ್ಯಾಂಕ್ಗೆ ಹೋಗಿ ಜಬೀವುಲ್ಲಾ ವಿಚಾರಿಸಿದಾಗ ಮನೆಯ ಕ್ರಯ ಪತ್ರದ ಮೂಲಕ ದಾಖಲೆ ನೀಡಿ ಸಾಲ ರಮೀಜ್ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಸಾಲ ಮರುಪಾವತಿ ಮಾಡದ ಕಾರಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಮನೆ ಸ್ವಾಧೀನಕ್ಕೆ ಆದೇಶ ಪಡೆಯುವುದಾಗಿ ಬ್ಯಾಂಕ್ ಮ್ಯಾನೇಜರ್, ಜಬೀವುಲ್ಲಾ ಅವರಿಗೆ ತಿಳಿಸಿದ್ದಾರೆ.
ಇದರಿಂದ ಕಂಗಲಾದ ಜಬೀವುಲ್ಲಾ, ರಮೀಜ್ ವಿರುದ್ಧ ಎನ್ ಆರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.