ಮೈಸೂರು:ಮದುವೆ ಆಗಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕ ಮಹದೇವಸ್ವಾಮಿ(30) ಮೃತ ಯುವಕನಾಗಿದ್ದಾನೆ. ಜುಲೈ 1 ರಂದು ರಾತ್ರಿ ಮಹದೇವಸ್ವಾಮಿ ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ ಎಂದು, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಯುವಕನ ತಂದೆ ಚಿನ್ನಪ್ಪ ದೂರು ನೀಡಿದ್ದರು.
ಸೋಮವಾರ ಸಿದ್ದೇಗೌಡನ ಹುಂಡಿ ಗ್ರಾಮದ ತಮ್ಮ ಜಮೀನಿನಲ್ಲಿ ನಾಪತ್ತೆಯಾಗಿದ್ದ ಮಹದೇವಸ್ವಾಮಿಯ ಮೃತ ದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದಿದೆ. ಮೃತನಿಗೆ ಅಕ್ಕ ಮತ್ತು ತಂಗಿ ಇದ್ದಾರೆ. ಅವರಿಗೂ ಮದುವೆ ಆಗಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮದುವೆ ಆಗಲಿಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ: ಮದುವೆಯಾಗಲು ಹೆಣ್ಣು ಸಿಗದೇ ಇರುವ ಕಾರಣಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರದಲ್ಲಿ ಇತ್ತೀಚೆಗೆ ನಡೆದಿತ್ತು. ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್(35) ಮೃತಪಟ್ಟಿರುವ ಯುವಕ. ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ನೊಂದಿದ್ದ ಯುವಕ ಮನೆಯ ಸಮೀಪದ ಗುಡ್ಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಮೃತ ಯುವಕ ನಾಗರಾಜ್ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈ ಯುವಕನ ಮದುವೆಯಾಗಲು ವಿಳಂಬವಾಗಿತ್ತು. ಅದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.