ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಮೈಸೂರು:ನಾನುಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ನಿಲುವು ಹೊಂದಿಲ್ಲ. ಟಿಕೆಟ್ ಕೊಡಿ ಎಂದು ಕೇಳಲು ಹೋಗುವುದಿಲ್ಲ. ಟಿಕೆಟ್ ಕೊಟ್ಟರೆ ಪಕ್ಷದ ಮಾತಿಗೆ ಬದ್ಧನಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿರುವ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾರನ್ನು ನಿಂತುಕೊಳ್ಳಿ ಎನ್ನುತ್ತಾರೋ ಅವರು ನಿಲ್ಲುತ್ತಾರೆ. ನಾನು ಈ ಬಗ್ಗೆ ಯಾವುದೇ ಆಕಾಂಕ್ಷೆ ಇಟ್ಟುಕೊಂಡಿಲ್ಲ. ಆದರೆ ಟಿಕೆಟ್ ನೀಡಿದರೆ ಏನೂ ಮಾಡಲಾಗದು. ಪಕ್ಷದ ಮಾತಿಗೆ ಬದ್ದನಾಗಿ ನಿಲ್ಲುತ್ತೇನೆ ಎಂದರು.
ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ:ಸಂಸದ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಲು ಅವರೇನು ದೊಡ್ಡ ನ್ಯಾಷನಲ್ ಲೀಡರ್ ಆಗಿದ್ದಾರಾ? ಅವರು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿದ್ದಾರೆ. ತಂದೆಯವರು ತಮ್ಮ 45 ವರ್ಷದ ರಾಜಕೀಯ ಜೀವನದಲ್ಲಿ ಯಾರ ಮೇಲೂ ಹಗೆ ಸಾಧಿಸಿಲ್ಲ. ಅವರಿಗೆ ಅನ್ಯಾಯ ಮಾಡಿರುವ ವ್ಯಕ್ತಿಗಳ ಮೇಲೂ ಹಗೆ ಸಾಧಿಸಿಲ್ಲ. ಅಂಥದ್ರಲ್ಲಿ ಪ್ರತಾಪ್ ಸಿಂಹ ಮೇಲೇಕೆ ಹಗೆ ಸಾಧಿಸುತ್ತಾರೆ?. ಅವರೇನು ತಪ್ಪು ಮಾಡಿದ್ದಾರೋ ಅದರ ಮೇಲೆ ಕಾನೂನು ಕ್ರಮ ಆಗುತ್ತದೆ. ಅವರು ಮಾಡಿದ ತಪ್ಪಿನಿಂದ ಬಚಾವ್ ಆಗಲು ಬೇರೆಯವರ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ನಾನು ಸಂವಿಧಾನದಲ್ಲಿ ಇರುವುದನ್ನು ಮತ್ತು ಅಂಬೇಡ್ಕರ್ ಹೇಳಿದ್ದನ್ನು ಹೇಳಿದ್ದೇನೆ. ಸ್ವತಂತ್ರವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸಂವಿಧಾನದಲ್ಲಿ ಇರುವುದನ್ನು ಬಿಟ್ಟು ಮತ್ತೇನೂ ಹೇಳಿಲ್ಲ. ಬೇಕಿದ್ದರೆ ಅದನ್ನೇ ಪುನರುಚ್ಚಾರ ಮಾಡುತ್ತೇನೆ. ನಮ್ಮ ರಾಷ್ಟ್ರ ಜಾತ್ಯಾತೀತವಾಗಿ ಉಳಿಯಬೇಕು ಎಂಬುದನ್ನು ಹೇಳಿದ್ದೇನೆ. ಯಾವ್ಯಾವ ದೇಶಗಳು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾವೋ ಆ ದೇಶಗಳೆಲ್ಲಾ ವಿನಾಶವಾಗಿವೆ. ಉದಾಹರಣೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಎಂದು ಉದಾಹರಣೆ ನೀಡಿದ್ದೇನೆ. ಅದನ್ನು ಬಿಟ್ಟು ಮತ್ತೇನೂ ಹೇಳಿಲ್ಲ ಎಂದು ತಾವು ದಾವಣಗೆರೆಯಲ್ಲಿ ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ:ಸಂವಿಧಾನ ನಮಗೆ ಮೂಲಗ್ರಂಥ ಆಗಬೇಕು, ಅದನ್ನು ರಕ್ಷಿಸುವ, ಉಳಿಸುವ ಕೆಲಸ ಮಾಡಬೇಕು: ಯತೀಂದ್ರ ಸಿದ್ದರಾಮಯ್ಯ