ಮೈಸೂರು:ಸಾಂತ್ವನ ಹೇಳಲು ಹೊರಟಿದ್ದ ರಾಜಕೀಯ ನಾಯಕರಿಗೆ ನಿರ್ಬಂಧ ಹೇರಿರುವುದು ಅವರ ಹಕ್ಕನ್ನು ಕಿತ್ತುಕೊಂಡಂತೆ ಎಂದು ಶಾಸಕ ಯತೀಂದ್ರ ತಮ್ಮ ತಂದೆ ಸಿದ್ದರಾಮಯ್ಯನವರಿಗೆ ಮಂಗಳೂರಿಗೆ ಹೋಗಲು ಸರ್ಕಾರ ಹೇರಿದ ನಿರ್ಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ.. ರಾಜ್ಯದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಅನಗತ್ಯ ಕಾಯ್ದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ನಾಳೆ ಅಥವಾ ಅನುಮತಿ ಸಿಕ್ಕ ದಿನ ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಮುಸ್ಲಿಮರ ಮೇಲೆ ದ್ವೇಷ ಇಟ್ಟುಕೊಂಡು ಹಾಗೂ ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವ ಕಾರಣ ಧರ್ಮದ ಮೇಲೆ ಧೃವೀಕರಣ ಮಾಡುವ ದೃಷ್ಟಿಯಿಂದ ಈ ಕಾಯ್ದೆ ತಂದಿದೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಪ್ರತಿಭಟನೆ ಮಾಡುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದ್ದು, ಮೈಸೂರಿನಲ್ಲಿ 144 ಸೆಕ್ಷನ್ ವಾಪಸ್ ಪಡೆದ ನಂತರ ಪ್ರತಿಭಟನೆ ನಡೆಸುತ್ತೇವೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆದರೆ ಮಾತ್ರ ಪ್ರತಿಭಟನೆ ನಿಲ್ಲುತ್ತದೆ. ಈ ಕಾಯ್ದೆ ಬಗ್ಗೆ ವಿರೋಧ ಪಕ್ಷದವರನ್ನು ಕರೆದು ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಯು ಟಿ ಖಾದರ್ ಹೇಳಿಕೆಯನ್ನು ತಿರುಚಲಾಗಿದೆ ಎಂದರು.
ಮಂಗಳೂರು ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಮನೆಗೆ ಹೋಗಿ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಸರ್ಕಾರ ತಡೆದಿದೆ. ಇದು ಒಂದು ರೀತಿ ನಾಯಕರ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ. ನಾಯಕರ ಸ್ಥಿತಿಯೇ ಈ ರೀತಿ ಆದರೆ ಇನ್ನೂ ಜನ ಸಾಮಾನ್ಯರ ಸ್ಥಿತಿ ಏನು ಎಂದು ವರುಣ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.