ಕರ್ನಾಟಕ

karnataka

ಕೋಲಾರದಲ್ಲಿ ಸಿದ್ದರಾಮಯ್ಯ, ವರುಣಾದಲ್ಲಿ ನಾನೇ ಸ್ಪರ್ಧಿಸ್ತೀನಿ: ಶಾಸಕ ಯತೀಂದ್ರ ಘೋಷಣೆ

By

Published : Feb 9, 2023, 9:57 AM IST

Updated : Feb 9, 2023, 11:19 AM IST

ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಖಚಿತ - ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ - ಚುನಾವಣಾ ಅಭ್ಯರ್ಥಿಯಾಗಿ ಘೋಷಿಸಿಕೊಂಡ ಯತೀಂದ್ರ - ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ

yatindra-siddaramaiah
ಶಾಸಕ ಯತೀಂದ್ರ ಘೋಷಣೆ

ಚುನಾವಣಾ ಸ್ಪರ್ಧೆ ಬಗ್ಗೆ ಶಾಸಕ ಯತೀಂದ್ರ ಘೋಷಣೆ

ಮೈಸೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರ ಸ್ಪರ್ಧೆಯ ಅನಿಶ್ಚಿತತೆ ಬರೆಹರಿದಿದೆ. ಸಿದ್ದರಾಮಯ್ಯ ಅವರು, ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ನಾನು ವರುಣಾದಲ್ಲಿ ಮುಂದುವರಿಯುವುದಾಗಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಘೋಷಿಸಿದರು.

ತಿ.ನರಸೀಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತೀಂದ್ರ, ವಿಧಾನಸಭೆ ಚುನಾವಣೆಯಲ್ಲಿ ತಂದೆಯವರು ಕೋಲಾರದಲ್ಲಿ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಹೀಗಾಗಿ ನಾನು ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ಮುಂದುವರಿಯುವೆ. ವರುಣಾ ಕಾಂಗ್ರೆಸ್​ನ ಭದ್ರಕೋಟೆ. ವರುಣಾ ಕ್ಷೇತ್ರ ರಚನೆ ಆದಾಗಿನಿಂದಲೂ ಇಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿದೆ ಎಂದು ಹೇಳಿದರು.

ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ, ನಮಗೆ ಭಯವಿಲ್ಲ. ಗೆಲ್ಲಬೇಕೆಂದು ಎಲ್ಲರೂ ತಂತ್ರ ಮಾಡುತ್ತಾರೆ. ಅಂತಿಮವಾಗಿ ವರುಣ ಕ್ಷೇತ್ರದಲ್ಲಿ ನಾವೇ ಗೆಲ್ಲೋದು. ಈ ಕ್ಷೇತ್ರದಲ್ಲಿ ತಂದೆಯವರು ಉತ್ತಮ ಕೆಲಸ ಮಾಡಿದ್ದಾರೆ. ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಮೆಲ್ಲಹಳ್ಳಿ ಗ್ರಾಮದಲ್ಲಿ ಬೈಕ್ ಮೇಲೆ ತೆರಳಿ ಗ್ರಾಮ ವೀಕ್ಷಣೆ ಮಾಡಿದರು.

ತಂದೆಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದ ಪುತ್ರ:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರದ ಹುಡುಕಾಟದಲ್ಲಿದ್ದಾಗ ಪುತ್ರ ಯತೀಂದ್ರ ಅವರೇ ತಂದೆಗೆ ಕ್ಷೇತ್ರ ತ್ಯಾಗ ಮಾಡಲು ಮುಂದಾಗಿದ್ದರು. ವರುಣಾದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕು ಎಂದು ಕ್ಷೇತ್ರದ ಜನರು ಬಯಸಿದ್ದಾರೆ. ವರುಣ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅವರು ತೀರ್ಮಾನ ಮಾಡಿದ್ರೆ, ನಾನು ಅವರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಅಪ್ಪ ನಿಂತರೆ ನಾನು ಎಲ್ಲೂ ಸ್ಪರ್ಧೆ ಮಾಡಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಪ್ಪನಿಗಾಗಿ ಪ್ರಚಾರ ಮಾಡ್ತೇನೆ. ತ್ಯಾಗ ಏನೂ ಅಲ್ಲ, ತಂದೆ ನಿಲ್ತಾರೆ ಎಂದರೆ ಬೇರೆಯವರು ಬಿಟ್ಟು ಕೊಡ್ತಾರೆ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದಿದ್ದರು.

ವರುಣಾದಲ್ಲಿ ಸ್ಪರ್ಧೆಗೆ ಅರ್ಜಿ ಹಾಕಿದ್ದ ಯತೀಂದ್ರ:ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲು ಬಯಸುವ ಅಭ್ಯರ್ಥಿಗಳಿಂದ ಕಾಂಗ್ರೆಸ್ ಪಕ್ಷ ಅರ್ಜಿ ಆಹ್ವಾನಿಸಿತ್ತು. ನವೆಂಬರ್​ 5 ರಿಂದ 15 ರವರೆಗೆ ಅರ್ಜಿ ಹಾಕಲು ದಿನಾಂಕ ನಿಗದಿಪಡಿಸಲಾಗಿತ್ತು. ಬಳಕಕ ಅವರನ್ನು ನವೆಂಬರ್ 21ಕ್ಕೆ ವಿಸ್ತರಿಸಲಾಗಿತ್ತು.

ಈ ವೇಳೆ, ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ವರುಣಾದಿಂದಲೇ ಸ್ಪರ್ಧಿಸುವುದಾಗಿ ಅರ್ಜಿ ಹಾಕಿದ್ದರು. ಅವರ ತಂದೆ ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಯ ಮಧ್ಯೆಯೇ ಯತೀಂದ್ರ ಅವರು ಅರ್ಜಿ ಸಲ್ಲಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಅವರೇ ವರುಣಾದಿಂದ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಕೋಲಾರದಿಂದ ಸ್ಪರ್ಧೆ ಘೋಷಿಸಿದ್ದ ಸಿದ್ದು:ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಬಾದಾಮಿ, ಚಾಮರಾಜಪೇಟೆ, ತುಮಕೂರು ನಗರ, ಚಿಕ್ಕಮಗಳೂರು, ಚಾಮುಂಡೇಶ್ವರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಹೆಸರು ಇವರ ಎರಡನೇ ಆಯ್ಕೆಯಲ್ಲಿ ಕೇಳಿ ಬಂದಿತ್ತು.

ಓದಿ:ಇಲ್ಲಿ ಯಾರೂ ಬೇಕಾದರೂ ಸಿಎಂ ಆಗಬಹುದು: ಸತೀಶ್ ಜಾರಕಿಹೊಳಿ

Last Updated : Feb 9, 2023, 11:19 AM IST

ABOUT THE AUTHOR

...view details