ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಚಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಡುವೆ ಯಾವುದೇ ವೈಮನಸ್ಸು ಇಲ್ಲ, ಹಿಂದೆ ಹೇಗಿದ್ದರೋ ಮುಂದೆಯೂ ಅದೇ ರೀತಿ ಇರುತ್ತಾರೆ ಎಂದು ತಮ್ಮ - ತಮ್ಮ ತಂದೆಗಳ ಪರ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಸುನೀಲ್ ಬೋಸ್ ಬ್ಯಾಟ್ ಬೀಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್, ತಿ.ನರಸೀಪುರ ಪುರಸಭೆ ಅಧ್ಯಕ್ಷ ಸೋಮು ರಾಜೀನಾಮೆ ನೀಡಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಕಾರಣರಲ್ಲ. ಅಧ್ಯಕ್ಷರಾಗಿದ್ದ ಸೋಮು ಅವರು ಸ್ವಪಕ್ಷದ ಸದಸ್ಯರಿಗಿಂತ, ಬೇರೆ ಪಕ್ಷದ ಸದಸ್ಯರಿಗೆ ಆದ್ಯತೆ ಕೊಡುತ್ತಿದ್ದರು. ಇದರಿಂದ ಸ್ವಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ತರಲು ಮುಂದಾದರು. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡುವಂತೆ ಪಕ್ಷದ ಹಿರಿಯರು ಸೂಚಿಸಿದರು ಎಂದರು.
ಸಿದ್ದರಾಮಯ್ಯ, ಮಹದೇವಪ್ಪ ನಡುವೆ ವೈಮನಸ್ಸು ಇಲ್ಲ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ನಡುವೆ ಈವರೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಮುಂದೆಯು ಇರುವುದಿಲ್ಲ ಎಂದು ಯತೀಂದ್ರ ಹಾಗೂ ಸುನಿಲ್ ಬೋಸ್ ವಿಶ್ವಾಸ ವ್ಯಕ್ತಪಡಿಸಿದರು.
ಹೇಗೆ ದುಡ್ಡು ಮಾಡಬೇಕೆಂಬ ಆಸೆ ಬಿಜೆಪಿಯವರಿಗಿದೆ:
ಬಿಜೆಪಿಯವರಿಗೆ ಜನರಿಗೆ ಉತ್ತಮ ಆಡಳಿತ ಕೊಡಬೇಕು ಎಂಬ ಆಲೋಚನೆಯಿಲ್ಲ. ಆದರೆ ಅಧಿಕಾರಕ್ಕೆ ಬಂದು ಹೇಗೆ ದುಡ್ಡು ಮಾಡಬೇಕೆಂಬ ಆಸೆ ಇದೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ, ರಾಜ್ಯದಲ್ಲಿ ದೊಡ್ಡ ಪ್ರಹಸನ ನಡೆಯಿತು. ಆದರೆ, ಸಚಿವ ಸಂಪುಟ ರಚನೆಯಾದ ಬಳಿಕ ಬೇಕಾದ ಖಾತೆ ಸಿಗಲಿಲ್ಲ, ಸಚಿವರಲ್ಲಿ ಅಸಮಾಧಾನ ಇದೆ. ಸಚಿವ ಸ್ಥಾನ ಸಿಗದೇ ಇರುವವರು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ 24 ದಿನಗಳ ಕಾಲ ಸಚಿವ ಸಂಪುಟವಿಲ್ಲದೆ ಅವರೊಬ್ಬರೇ ಕೆಲಸ ಮಾಡಿದ್ದರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಹಂತಹಂತವಾಗಿ ಆರಂಭಿಸಿ:
ರಾಜ್ಯದಲ್ಲಿ ಶಾಲೆ-ಕಾಲೇಜುಗಳನ್ನು ಹಂತಹಂತವಾಗಿ ಆರಂಭಿಸಬೇಕು. ಇಲ್ಲವಾದರೆ ಶೈಕ್ಷಣಿಕ ವಲಯ ಹಾಳಾಗಿ ಹೋಗಲಿದೆ. ಆನ್ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ವಾರಾಂತ್ಯ ಕರ್ಫ್ಯೂದಿಂದ ಯಾವುದೇ ಪ್ರಯೋಜನವಿಲ್ಲ, ಕೊರೊನಾ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗಡಿಯಲ್ಲಿ ಮತ್ತಷ್ಟು ಬಿಗಿ ಭದ್ರತೆ ಮಾಡಬೇಕು ಎಂದು ಯತೀಂದ್ರ ಸಲಹೆ ನೀಡಿದರು.