ಮೈಸೂರು :ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನೂತನ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಅಭಿವೃದ್ಧಿಗಾಗಿ ಪ್ರಾರಂಭಿಸಿದ ಜಾಗದಲ್ಲಿ ಕೂತು ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನಗರದ ಅಭಿವೃದ್ಧಿ ಮಾಡಲು ಸರ್ಕಾರ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದೆ. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ ಎಂದರು.
ನಗರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ. ಮೈಸೂರು ಸಾಕಷ್ಟು ಬೆಳೆದಿದೆ. ಜನಸಂಖ್ಯೆಯೂ ಹೆಚ್ಚಾಗಿದೆ. ಜನಸಂಖ್ಯೆಗೆ ತಕ್ಕಂತೆ ಬಡಾವಣೆಗಳು ಹೆಚ್ಚಾಗುತ್ತಿವೆ. ಮೂಲ ಸೌಲಭ್ಯ, ರಸ್ತೆ ಚರಂಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತೇನೆ ಎಂದು ತಿಳಿಸಿದರು. ನನಗೆ ಸಿಕ್ಕಿರುವುದು ಕಡಿಮೆ ಕಾಲಾವಕಾಶ. 6 ತಿಂಗಳಲ್ಲೇ 6 ವರ್ಷಗಳಲ್ಲಿ ಮಾಡಬಹುದಾದ ಕಾರ್ಯ ಮಾಡುವ ಹುಮ್ಮಸ್ಸಿದೆ ಎಂದು ಹೇಳಿದರು.