ಮೈಸೂರು: ಕಳೆದ 2 ವರ್ಷಗಳಿಂದ ನನ್ನ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ಈ ಬಗ್ಗೆ ಸೈಬರ್ ಕ್ರೈಮ್ಗೆ ದೂರು ನೀಡಲಾಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಾಜ ವಂಶಸ್ಥ ಯದುವೀರ್ ಮಾಧ್ಯಮಗಳ ಜೊತೆ ಮಾತನಾಡಿ, ಕಳೆದ 2 ವರ್ಷಗಳಿಂದಲೂ ನಮ್ಮ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಸೃಷ್ಟಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ನಗರದ ಸೈಬರ್ ಕ್ರೈಮ್ಗೆ ದೂರು ನೀಡಲಾಗಿದೆ ಎಂದರು.
ನಕಲಿ ಟ್ವಿಟರ್ ಖಾತೆ ತೆರೆದವರ ವಿರುದ್ಧ ಸೈಬರ್ ಠಾಣೆಗೆ ದೂರು ನೀಡಿದ ಯದುವೀರ್ ರೈತರ ಪ್ರತಿಭಟನೆ ಸಂಬಂದ ಪ್ರತಿಕ್ರಿಯಿಸಿ, ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚಾಗಿ ಹೇಳುವುದು ಸರಿಯಲ್ಲ. ನಾವೆಲ್ಲ ರಾಷ್ಟ್ರದ ಏಕತೆಯನ್ನು ಬೆಂಬಲಿಸಬೇಕು, ಜೊತೆಗೆ ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಒಳ್ಳೆಯದು. ರೈತ ಹೋರಾಟದ ಬಗ್ಗೆ ಸೆಲೆಬ್ರಿಟಿಗಳು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ, ಅವರನ್ನೇ ಕೇಳಿ ಎಂದರು.
ಇದನ್ನೂ ಓದಿ:ಮೈಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ರೈತ: ವಿಡಿಯೋ