ಮೈಸೂರು : ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಬರೀ ಊಹಾಪೋಹ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದ್ದಾರೆ. 'ಈಟಿವಿ ಭಾರತ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ವಿಚಾರ ಮಾಧ್ಯಮಗಳಿಂದಲೇ ನನಗೆ ಗೊತ್ತಾಗಿರುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಕಡೆಯಿಂದ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸದ್ಯ ಯಾವುದೇ ಆಲೋಚನೆ ಮಾಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ. ನಾನು ದೆಹಲಿಗೆ ಹೋಗುವುದು ಸೈಬರ್ ಸೆಕ್ಯೂರಿಟಿ ವಿಚಾರವಾಗಿ ಚರ್ಚೆ ಮಾಡಲು ಅಷ್ಟೇ. ನಾನು ಪ್ರಧಾನಿಯವರನ್ನು ಭೇಟಿ ಆಗಿಲ್ಲ. ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ಸ್ವತಃ ಯದುವೀರ್ ಈಟಿವಿ ಭಾರತ ಜೊತೆ ಮಾತನಾಡಿ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ.
ಪ್ರತಿ ಬಾರಿಯಂತೆ ಈ ಸಲವೂ ಅರಮನೆಯಲ್ಲಿ ಶರನ್ನವರಾತ್ರಿ ನಡೆಯಲಿದೆ. ಅರಮನೆಯಲ್ಲಿ ನವಮಿ ದಿನದ ನವರಾತ್ರಿಯಿಂದ ದಶಮಿ ದಿನದ ದಸರಾದವರೆಗೆ ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಜರುಗಲಿದೆ. ಸರ್ಕಾರದ ದಸರಾ ಸರ್ಕಾರವೇ ಮಾಡುತ್ತದೆ. ನಮ್ಮ ಸಲಹೆಗಳೇನು ಅವರಿಗೆ ಅವಶ್ಯಕತೆ ಇಲ್ಲ ಎಂದು ಯದುವೀರ್ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು - ಮೈಸೂರು ಹೆದ್ದಾರಿ ನಾಮಕರಣ : ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದ ಯದುವೀರ್