ಮೈಸೂರು: ಮೈಸೂರು ದಸರಾದಲ್ಲಿ ರಾಜವಂಶಸ್ಥರು ಅರಮನೆಯ ಒಳಗೆ ನಡೆಸುವ ಸಾಂಪ್ರದಾಯಿಕ ಶರನ್ನವರಾತ್ರಿ ಪೂಜೆ ಕೈಂಕರ್ಯಗಳು ಇತಿಹಾಸದ ಹಿನ್ನೆಲೆಯನ್ನು ಹೊಂದಿದೆ. ಅರಮನೆಯ ಒಳಗೆ ನವರಾತ್ರಿಯಲ್ಲಿ ನಡೆಯುವ ರತ್ನ ಖಚಿತ ಸಿಂಹಾಸನ ಪೂಜೆ, ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ಆಯುಧ ಪೂಜೆ, ವಿಜಯ ದಶಮಿ ಆಚರಣೆ ಸೇರಿದಂತೆ ಇತರ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜ ವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅರಮನೆಯ ಧಾರ್ಮಿಕ ಸಂಪ್ರದಾಯಿಕಗಳ ಬಗ್ಗೆ ವಿವರಿಸಿದ್ದಾರೆ.
400 ವರ್ಷಗಳಿಂದ ಶರನ್ನವರಾತ್ರಿ ಪೂಜೆ:ಯದು ವಂಶ ಸುಮಾರು 400 ವರ್ಷಗಳಿಂದ ಶರನ್ನವರಾತ್ರಿಯ ಪೂಜೆಗಳನ್ನು ಆಚರಿಸಿಕೊಂಡು ಬರುತ್ತಿದೆ. ಅದೇ ಆಚರಣೆಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದು, ಅದಕ್ಕಿಂತ ಹಿಂದೆ ವಿಜಯ ನಗರದ ಅರಸರು ದಸರಾ ಆಚರಿಸುತ್ತಿದ್ದರು. ಆನಂತರ ಸರ್ಕಾರದವರು ಈಗ ಸಾರ್ವಜನಿಕವಾಗಿ ಆಚರಿಸುತ್ತಿದ್ದಾರೆ. ಅದು ಪಬ್ಲಿಕ್ ದಸರಾ, ಈಗ ನಾಡಹಬ್ಬ ಆಗಿದೆ ಎಂದರು.
ನವರಾತ್ರಿಯಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳು:ಅರಮನೆಯ ಶರನ್ನವರಾತ್ರಿಯ ಪೂಜಾ ವಿಧಿ ವಿಧಾನಗಳನ್ನು ನಮ್ಮ ಯದು ವಂಶದವರೇ ಮಾಡಬೇಕು. ಅದೇ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ವಿಶೇಷವಾಗಿ ಆಶ್ವಯುಜ ಮಾಸದ ಪಾಡ್ಯ ದಿನದಿಂದ ಆರಂಭವಾದ ಶರನ್ನವರಾತ್ರಿಯ ಪೂಜೆಗಳು, ದಶಮಿಯ ದಿನದ ವಿಜಯ ದಶಮಿಯವರೆಗೆ ನಡೆಯುತ್ತದೆ. ಅದರ ಮಧ್ಯೆ 10 ದಿನಗಳು ಶರನ್ನವರಾತ್ರಿಯ ಆಚರಣೆಗಳು ನಡೆಯುತ್ತವೆ. ಬೇರೆ ಬೇರೆ ರೀತಿಯ ಪೂಜೆಗಳು ನಡೆಯುತ್ತವೆ. ಅದರಲ್ಲಿ ವಿಶೇಷವಾಗಿ ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ಕೊನೆಯಲ್ಲಿ ರುದ್ರ ಪೂಜೆ ಮತ್ತು ಶಮಿ ಪೂಜೆ ನಡೆಯುತ್ತದೆ ಎಂದು ಯಧುವೀರ್ ಒಡೆಯರ್ ಮಾಹಿತಿ ನೀಡಿದರು.
ಚಾಮುಂಡಿ ತಾಯಿ ನಮ್ಮ ಕುಲ ದೇವತೆ:ಚಾಮುಂಡೇಶ್ವರಿ ತಾಯಿಯನ್ನು ಚಾಮುಂಡಿ ಬೆಟ್ಟದಲ್ಲಿ ಋಷಿ ಮಾರ್ಕಂಡೇಯ ತಪಸ್ಸು ಮಾಡುವಾಗ ಸ್ಥಾಪನೆ ಮಾಡಿದ್ದು ಐತಿಹಾಸಿಕ ವಿಚಾರ. ಚಾಮುಂಡೇಶ್ವರಿ ತಾಯಿಗೆ ಬೇರೆ ಬೇರೆ ರಾಜ ವಂಶಸ್ಥರು ಪೂಜೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಂಶಸ್ಥರು ಚಾಮುಂಡೇಶ್ವರಿಯ ಕೃಪೆಯಿಂದ ಇಲ್ಲಿಯವರೆಗೆ ಮುಂದುವರಿದಿದ್ದು, ಚಾಮುಂಡೇಶ್ವರಿ ಈಗ ನಮ್ಮ ಕುಲದೇವತೆಯೂ ಹೌದು. ಆದ್ದರಿಂದ ನಾವು ಚಾಮುಂಡೇಶ್ವರಿಯನ್ನ ಪೂಜಿಸುತ್ತೇವೆ. ಅರಮನೆಯಲ್ಲಿ ಶರನ್ನವರಾತ್ರಿಯ ಮೊದಲ ದಿನ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುವ ನಮ್ಮ ಪರಂಪರೆ ಈಗಲೂ ಮುಂದುವರಿದಿದ್ದು, ಇದು ದಸರೆಯ ಸಂದರ್ಭದಲ್ಲಿ ನಾವು ನಡೆಸುವ ಒಂದು ಪೂಜಾ ವಿಧಾನ ಎಂದು ರತ್ನ ಖಚಿತ ಸಿಂಹಾಸನದ ಮೇಲೆ ಖಾಸಗಿ ದರ್ಬಾರ್ ನಡೆಸುವ ಬಗ್ಗೆ, ಅದರ ಪರಂಪರೆಯ ಬಗ್ಗೆ ತಿಳಿಸಿದರು.