ಮೈಸೂರು: ನವರಾತ್ರಿಯ ಕೊನೆಯ ದಿನ ಅರಮನೆಯಲ್ಲಿ ವಿಜಯ ದಶಮಿಯ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ನವರಾತ್ರಿಯ ಕೊನೆಯ ದಿನವಾದ ಇಂದು ಅರಮನೆಯಲ್ಲಿ ವಿಜಯ ದಶಮಿಯ ಧಾರ್ಮಿಕ ಕೈಂಕರ್ಯಗಳು ಬೆಳಗ್ಗಿನಿಂದಲೇ ಆರಂಭಗೊಂಡವು.
ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮಿಸಿದವು. ಬಳಿಕ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗ ವೀಕ್ಷಣೆ ಮಾಡಿದ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಚಿನ್ನ ಲೇಪಿತ ಪಲ್ಲಕ್ಕಿಯಲ್ಲಿ ಖಾಸಾ ಆಯುಧಗಳನ್ನು ಇಟ್ಟು 11 ರಿಂದ 11:40ರ ಶುಭ ಲಗ್ನದಲ್ಲಿ ಅರಮನೆಯಿಂದ ಭುವನೇಶ್ವರಿ ದೇವಾಲಯದವರೆಗೆ ವಿಜಯ ದಶಮಿ ಮೆರವಣಿಗೆ ಮೂಲಕ ಅಲ್ಲಿಗೆ ಸಾಗಿ ಶಮಿ ಪೂಜೆ ನೆರವೇರಿಸಿದರು.
ಪೂಜೆ ಬಳಿಕ ಅರಮನೆಗೆ ರಾಜವಂಶಸ್ಥರು ವಾಪಸ್ ಆದರು. ಈ ಮೂಲಕ ನವರಾತ್ರಿಯ 10 ದಿನಗಳ ಕಾಲ ನಡೆದ ಧಾರ್ಮಿಕ ಕೈಂಕರ್ಯಗಳು ಇಂದಿಗೆ ಕೊನೆಗೊಂಡವು. ಸಂಜೆ ಜಂಬೂಸವಾರಿ ಮೆರವಣಿಗೆ ನಡಯಲಿದೆ. ಗಣ್ಯರೊಂದಿಗೆ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಜಂಬೂಸವಾರಿಯ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.