ಮೈಸೂರು:ಆಷಾಢದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬಂದಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಲದೇವರಿಗೆ ಮೊದಲ ಪೂಜೆ ಸಲ್ಲಿಸಿದರು.
ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದ ರಾಜ ವಂಶಸ್ಥ ಯದುವೀರ್, ನಟ ದರ್ಶನ್ ನಾಡ ಅಧಿದೇವತೆ ಚಾಮುಂಡಿಗೆ ಮೊದಲ ಆಷಾಢ ಶುಕ್ರವಾರದ ನಿಮಿತ್ತ ಭಕ್ತ ಸಾಗರವೇ ಬೆಳಗಿನ ಜಾವ 3 ಗಂಟೆಯಿಂದಲೇ ಹರಿದುಬಂದಿದೆ. ನಟ ದರ್ಶನ್ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಆಷಾಢ ಶುಕ್ರವಾರದ ಪ್ರಯುಕ್ತ ದೇವಿಯ ದರ್ಶನ ಪಡೆದರು.
ಚಾಮುಂಡಿ ತಾಯಿಯ ಭಕ್ತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿ ವರ್ಷ ಆಷಾಢ ಮಾಸದ ಮೊದಲ ಶುಕ್ರವಾರ ತಪ್ಪದೇ ಚಾಮುಂಡಿ ತಾಯಿಯ ದರ್ಶನವನ್ನು ಪಡೆದರು . ಅದರಂತೆ ಈ ವರ್ಷವು ಮೊದಲ ಆಷಾಢ ಶುಕ್ರವಾರ ಇಂದು ತಮ್ಮ ಆಪ್ತರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ನಂತರ ಪ್ರತಿ ವರ್ಷದಂತೆ ಹರಕೆಯನ್ನು ತೀರಿಸಿದರು.
ಇಂದು ಮುಂಜಾನೆ ದೇವಸ್ಥಾನದಲ್ಲಿ ಚಾಮುಂಡೇಶ್ವರಿಗೆ ದೇವಿಕೆರೆಯಿಂದ ತಂದ ಜಲದಿಂದ ಜಲಾಭಿಷೇಕ ಮಾಡಿ ದೇವಾಲಯವನ್ನು ಸ್ವಚ್ಛಗೊಳಿಸಿ ನಂತರ ರುದ್ರಾಭಿಷೇಕ, ಪಂಚಾಭಿಷೇಕ ನಡೆದ ನಂತರ ದೇವಿಗೆ ಕುಂಕುಮಾರ್ಚನೆ ಹಾಗೂ ಸಹಸ್ರಾರ್ಚನೆ ನಡೆಸಿ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು ದೇವಾಲಯದ ಗರ್ಭಗುಡಿ ಹಾಗೂ ಒಳಭಾಗದಲ್ಲಿ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಬೆಳಗಿನ ಜಾವ 5 ಗಂಟೆಯಿಂದ ಇಂದು ಮಧ್ಯರಾತ್ರಿಯ ವರೆಗೆ ಚಾಮುಂಡೇಶ್ವರಿದೇವಿ ದರ್ಶನಕ್ಕೆ ಅವಕಾಶ ಇರುತ್ತದೆ.
ದೇವಾಲಯದ ಸುತ್ತ ಹಾಗೂ ಒಳಗಡೆ ವಿಶೇಷ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಖಾಸಗಿ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಿದ್ದು ಭಕ್ತರಿಗೆ ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ಬೆಟ್ಟಕ್ಕೆ ಉಚಿತ ಬಸ್ ಸೇವೆಯನ್ನು ಏರ್ಪಡಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ಸುತ್ತ ಸಿಸಿಟಿವಿಗಳನ್ನು ಅಳವಡಿಸಿದ್ದು ಪ್ರಸಾದ ನೀಡುವವರಿಗೆ ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ.