ಮೈಸೂರು: ಲೇಖಕ ಕುಕ್ಕರಹಳ್ಳಿ ಬಸವರಾಜು (67) ರಾಮಕೃಷ್ಣನಗರದ ನಿವಾಸದಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ರಾಮಕೃಷ್ಣನಗರದ ನಿವಾಸದಲ್ಲಿ ಕುಕ್ಕರಹಳ್ಳಿ ಬಸವರಾಜ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಧನಗಳ್ಳಿಯ ಸಿದ್ದಯ್ಯ ಮತ್ತು ನಿಂಗಮ್ಮ ದಂಪತಿಯ ಪುತ್ರನಾಗಿ 1955ರ ಅಕ್ಟೋಬರ್ 2ರಂದು ಜನಿಸಿದ ಬಸವರಾಜು ಬಹುಮುಖ ಪ್ರತಿಭೆ. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದರು. ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿ, ಸಂಕುಲ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ಮೈಸೂರಿನ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಮಧ್ಯರಾತ್ರಿ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.