ಮೈಸೂರು: ಕೊರೊನಾ ಮುಕ್ತಿಗಾಗಿ ಕೊರೊನಾ ಮಾರಮ್ಮ ನೀ ಹೋಗಮ್ಮ ಎಂದು ಸಾರ್ವಜನಿಕರು ವಿಶೇಷ ಪೂಜೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದೆ.
ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೊರೊನಾ ಹೋಗಲಾಡಿಸಲು ಹಗಳಿರುಳು ಶ್ರಮಿಸುತ್ತಿದ್ದರೆ, ಇತ್ತ ಕೆಲವರು ದೇವರ ಮೊರೆ ಹೋಗುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಕೊರೊನಾ ವೈರಸ್ಗೆ ಮಾರಮ್ಮ ಎಂದು ಬಣ್ಣಿಸಿ ಪೂಜೆ ಮಾಡುತ್ತಿದ್ದಾರೆ.
ಕೊರೊನಾ ಮಾರಮ್ಮ ನೀ ಹೋಗಮ್ಮ ಎಂದು ಪೂಜೆ ಸಲ್ಲಿಸಿದ ಮೈಸೂರು ಜನತೆ ನಗರದಲ್ಲಿರುವ ಎನ್.ಆರ್. ಮೊಹಲ್ಲಾದಲ್ಲಿ ಮನೆ-ಮನೆಗಳಲ್ಲಿ ತಂಬಿಟ್ಟು ಹಾಗೂ ಬೇವಿನ ಸೊಪ್ಪು ಇಟ್ಟು ಪೂಜೆ ಮಾಡುವ ಮೂಲಕ ತಂಪನ್ನೆರೆದು ಕೊರೊನಾ ಮಾರಮ್ಮ ಪ್ರಪಂಚದಿಂದ ನೀ ಹೋಗಮ್ಮ ಎಂದು ಬೇಡಿಕೊಂಡಿದ್ದಾರೆ.
ಯುಗಾದಿ ಹಬ್ಬಕ್ಕೂ ಮುನ್ನ ಎಲ್ಲಾ ಗ್ರಾಮಗಳಲ್ಲಿ ಮಾರಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಯುಗಾದಿ ನಂತರವೂ ಇದೇ ಮೊದಲ ಬಾರಿಗೆ ಕೊರೊನಾ ಮುಕ್ತಿಗಾಗಿ ಮಾರಮ್ಮನ ಪೂಜೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ಲೇಗಮ್ಮ ಇರುವಂತೆ ಮುಂದೊಂದು ದಿನ ಕೊರೊನಮ್ಮ ದೇವಸ್ಥಾನ ನಿರ್ಮಾಣವಾದರೂ ಅಚ್ಚರಿ ಇಲ್ಲ ಎನ್ನಬಹುದು.