ವಿಶ್ವಕಪ್ ಫೈನಲ್: ಭಾರತದ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳಿಂದ ದೇವಾಲಯಗಳಲ್ಲಿ ಪೂಜೆ ಮೈಸೂರು/ಬೆಂಗಳೂರು:ಇಂದು 2023ರ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆಡಲಿದೆ. ಈ ಹೈವೋಲ್ಟೇಜ್ ಪಂದ್ಯದ ಕಾವು ಇಡೀ ದೇಶವನ್ನೇ ಆವರಿಸಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಂತರ ಭಾರತೀಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನಲ್ಲೂ ವಿಶ್ವಕಪ್ ಫೈನಲ್ ಬಿಸಿ ಜೋರಾಗಿದೆ. ನಗರದ ಪ್ರದೇಶವೊಂದರ ರಸ್ತೆಯಲ್ಲಿಯೇ ವಿಶ್ವಕಪ್ ಟ್ರೋಫಿ ಚಿತ್ರ ಬರೆದು, ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಲಾಗಿದೆ. ಮಂಜುನಾಥ ನಗರದ ಶ್ರೀ ಭುವನೇಶ್ವರಿ ಯುವಕ ಸಂಘದ ಸದಸ್ಯರು ಟೀಂ ಇಂಡಿಯಾ ಗೆಲುವಿಗಾಗಿ ವಿಶೇಷ ಪೂಜೆ ಕೈಗೊಂಡಿದ್ದು, ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ಮಾಡಿಸಿ ಪೂಜೆ ಮಾಡಿಸಿದ್ದಾರೆ. ಅಲ್ಲದೇ ರಸ್ತೆಯ ಎರಡೂ ಕಡೆಗಳಲ್ಲಿ ದೊಡ್ಡದಾಗಿ ಬಾವುಟಗಳನ್ನು ಹಾರಿಸಿ, 'ಗೆದ್ದು ಬಾ ಟೀಂ ಇಂಡಿಯಾ' ಎಂದು ಹಾರೈಸಿದ್ದಾರೆ.
ಧಾನ್ಯಗಳ ಮೂಲಕ ಶುಭ ಹಾರೈಕೆ: ಮೈಸೂರಿನಲ್ಲಿ ಕೋಟಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕ್ರಿಕೆಟ್ ಅಭಿಮಾನಿಗಳು ಧಾನ್ಯಗಳ ಮೂಲಕ ಭಾರತ ತಂಡದ ಆಟಗಾರರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಅಲ್ಲದೇ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ಇಂದು ಮಧ್ಯಾಹ್ನ 2ಗಂಟೆಗೆ ಶುರುವಾಗಲಿರುವ ಫೈನಲ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ಉತ್ತಮವಾದ ಎಲ್ಸಿಡಿ ಪರದೆ ಮತ್ತು ಸೌಂಡ್ ಸಿಸ್ಟಮ್ನೊಂದಿಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದರಿ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಗೆ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಯ್ಯಪ್ಪ ಭಕ್ತರಿಂದ ಪೂಜೆ: ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಕೇರಳದ ಗುರುವಾಯೂರು ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಅಯ್ಯಪ್ಪ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 2023ನೇ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಸತತವಾಗಿ 10 ಪಂದ್ಯಗಳಲ್ಲಿ ಅಜೇಯವಾಗಿ ಜಯಗಳಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದೆ. ಈ ಮೂಲಕ ಇಂಡಿಯಾ ನಾಲ್ಕನೇ ಬಾರಿಗೆ ಫೈನಲ್ಗೆ ಆಯ್ಕೆಯಾಗಿದ್ದು, ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಈ ಬಾರಿಯೂ ಭಾರತ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ. ಕೋಟ್ಯಂತರ ಭಾರತೀಯರ ಕನಸು ನನಸಾಗಲಿ ಎಂದು ಅಯ್ಯಪ್ಪ ಭಕ್ತರು ಶುಭ ಕೋರಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ವಿಶ್ವಕಪ್ ಫೈನಲ್: ಟೀಂ ಇಂಡಿಯಾಗೆ ಶುಭ ಕೋರಿದ ಶಿವಮೊಗ್ಗದ ಕ್ರಿಕೆಟ್ ಅಭಿಮಾನಿಗಳು