ಮೈಸೂರು:ಈ ಬಾರಿ ದಸರಾ ಕ್ರೀಡಾಕೂಟ ಹಾಗೂ ಯುವದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿ.ವಿ. ಸಿಂಧು ಭಾಗವಹಿಸಲಿದ್ದಾರೆ.
ಈ ಬಾರಿ ದಸರಾ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಕ್ರೀಡಾ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಪಿ.ವಿ. ಸಿಂಧು ಅವರನ್ನು ಅಕ್ಟೋಬರ್ 1ರಂದು ನಡೆಯುವ ಯುವದಸರಾ ಉದ್ಘಾಟನೆಗೆ ಆಗಮಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರದ ಮೂಲಕ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ನೀವು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದೀರಿ, ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ನೀವು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮುಖ್ಯಮಂತ್ರಿ ಆಹ್ವಾನ ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಮೈಸೂರಿಗೆ ಆಗಮಿಸಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಒಪ್ಪಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಮೊದಲೇ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ಉದ್ಘಾಟಿಸಲು ಪಿ.ವಿ. ಸಿಂಧು ಅವರನ್ನು ಕರೆಸಲು ಪ್ರಯತ್ನ ನಡೆಸಲಾಗಿತ್ತು. ಸದ್ಯ ಪ್ರಯತ್ನ ಸಫಲವಾಗಿದೆ. ಪಿ.ವಿ. ಸಿಂಧು ಅವರ ಸಮಯದ ಲಭ್ಯತೆಯನ್ನು ನೋಡಿಕೊಂಡು ಮೈಸೂರಿಗೆ ಆಗಮಿಸಲಿದ್ದು, ಅ.1ರಂದು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.