ಮೈಸೂರು:ಜಿಲ್ಲೆಯ ವಿದ್ಯಾರಣ್ಯಪುರಂನ ವೀರಶೈವ ರುದ್ರ ಭೂಮಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿರುವ ವೃದ್ಧೆಯೊಬ್ಬರು ಕಳೆದ 17 ವರ್ಷಗಳಿಂದ ಶವಗಳಿಗೆ ಗುಂಡಿ ತೆಗೆದು ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಇವರ ಸೇವೆ ಕಂಡು ಅನೇಕ ಸಂಘ-ಸಂಸ್ಥೆಗಳು ಇವರಿಗೆ ಸನ್ಮಾನ ಮಾಡಿದ್ದಾರೆ.
ನೀಲಮ್ಮ ಅವರು ಹೆಚ್.ಡಿ.ಕೋಟೆಯಿಂದ ಮದುವೆಯಾಗಿ ಬಂದಾಗಿನಿಂದ ಸ್ಮಶಾನದಲ್ಲೇ ವಾಸವಾಗಿದ್ದಾರೆ. ಇವರ ಗಂಡ ಶವಗಳಿಗೆ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿದ್ದರು. 2005ರಲ್ಲಿ ಹೃದಯಾಘಾತದಿಂದ ತೀರಿಕೊಂಡರು. ಇದಾದ ನಂತರ ನೀಲಮ್ಮ ಅವರಿಗೆ ಮುಂದೆ ಏನು ಮಾಡುವುದು? ಎನ್ನುವುದು ತಿಳಿಯದೆ ತಾವೇ ಗುಂಡಿ ತೆಗೆಯಲು ಪ್ರಾರಂಭಿಸಿದರು.
ಹೊರಗಡೆ ಎಲ್ಲಿಯೂ ಹೋಗದೆ ಸ್ಮಶಾನದ ಕಾಂಪೌಂಡ್ ಒಳಗೆ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸವನ್ನು ಕಂಡು ಯಾರೂ ಏನೂ ಹೇಳಲಿಲ್ಲ. ಹಾಗಾಗಿ, ಇವರು ಕಳೆದ 17 ವರ್ಷಗಳಿಂದ ಸ್ಮಶಾಣದಲ್ಲೇ ವಾಸವಾಗಿದ್ದುಕೊಂಡು ಶವಗಳಿಗೆ ಗುಂಡಿ ತೆಗೆಯುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರು ಗುಂಡಿ ತೆಗೆಯಲು ಶುರು ಮಾಡಿದಾಗ ಒಂದು ಗುಂಡಿಗೆ 200 ರೂಪಾಯಿ ನೀಡುತ್ತಿದ್ದರು. ಈಗ 1000 ರೂಪಾಯಿ ನೀಡುತ್ತಿದ್ದಾರಂತೆ.
ಒಂದು ಗುಂಡಿಯನ್ನು ತೆಗೆಯಲು ಇವರಿಗೆ 3 ರಿಂದ 3:30 ಗಂಟೆ ಬೇಕಾಗುತ್ತದೆ. ವಯಸ್ಸಾಗಿರುವುದರಿಂದ ಕೆಲವೊಮ್ಮೆ ಇವರ ಮಗ ಸಹಾಯ ಮಾಡುತ್ತಾರೆ. ಒಂದು ಸಲ ಗುಂಡಿ ತೆಗೆಯುವಾಗ ಹಾರೆ ಕಾಲಿಗೆ ನಾಟಿ ಏಟು ಮಾಡಿಕೊಂಡು ನಂತರ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕಿಸಿಕೊಂಡು ಬಂದು ಮತ್ತೆ ಗುಂಡಿ ತೆಗೆದಿದ್ದರಂತೆ. ಈಗ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದಾರಂತೆ. ಅದನ್ನು ಬಿಟ್ಟು ಇನ್ಯಾವುದೇ ರೋಗ ಇಲ್ಲ. 65 ನೇ ವರ್ಷದಲ್ಲೂ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.