ಮೈಸೂರು: ಆಸ್ತಿಗಾಗಿ ಒಂಟಿ ಮಹಿಳೆಯನ್ನು ಹೊಂಚು ಹಾಕಿ ಸಂಬಂಧಿಕರೇ ಕೊಲೆ ಮಾಡಿರುವ ಪ್ರಕರಣ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಟ್ಟದಪುರ ಗ್ರಾಮದ ಗಂಗಮ್ಮ (45) ಕೊಲೆಯಾಗಿದ್ದು, 7 ವರ್ಷದ ಹಿಂದೆ ಈಕೆಯ ಗಂಡ ಸಾವನ್ನಪ್ಪಿದ್ದರು. ಈಕೆಯ ಹೆಸರಿನಲ್ಲಿ ಜಮೀನು ಮತ್ತು ನಿವೇಶನಗಳಿದ್ದು, ಇದನ್ನು ಪಡೆಯಲು ಸಂಬಂಧಿಕರು ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಹಲವು ಬಾರಿ ಸಂಬಂಧಿಕರು ಮಹಿಳೆಗೆ ಕಿರುಕುಳ ನೀಡಿದ್ದು, ಈ ಹಿನ್ನೆಲೆ ಪೊಲೀಸರು ಸಂಬಂಧಿಕರಿಗೆ ಎಚ್ಚರಿಕೆ ಸಹ ನೀಡಿದ್ದರು ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ಅಣ್ಣನ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದ ಮಹಿಳೆ ಕಾಣೆಯಾಗಿದ್ದಾಳೆ ಎಂದು ಕೊಲೆಯಾದ ಗಂಗಮ್ಮನ ಅಣ್ಣ ಗೋವಿಂದೇಗೌಡ ಬೆಟ್ಟದಪುರ ಠಾಣೆಗೆ ದೂರು ನೀಡಿದ್ದರು.
ನಂತರ ಗಂಗಮ್ಮನ ಪತಿ ಮನೆಯ ಸಂಬಂಧಿಕರಾದ ರಾಜೇಶ್, ಮಂಜು ಕುಡಿದ ಅಮಲಿನಲ್ಲಿ ಗಂಗಮ್ಮನನ್ನು ಕೊಲೆ ಮಾಡಿರುವುದಾಗಿ ಸ್ನೇಹಿತರ ಬಳಿ ಬಾಯಿ ಬಿಟ್ಟಿದ್ದು, ಈ ವಿಚಾರ ತಿಳಿದ ಪೊಲೀಸರು ಗಂಗಮ್ಮನ ಬಾವ ಶಿವರಾಜ್, ಕಿರಣ್, ರವಿಶಂಕರ್, ಮಂಜು, ರಾಜೇಶ್, ವೆಂಕಟೇಶ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸ್ತಿಗಾಗಿ ಗಂಗಮ್ಮನನ್ನು ಆಗಸ್ಟ್ 3ರ ರಾತ್ರಿ ಮನೆಗೆ ನುಗ್ಗಿ ಕೊಲೆ ಮಾಡಿ ಮೃತದೇಹವನ್ನು ಕಾವೇರಿ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಬೆಟ್ಟದಪುರ ಪೊಲೀಸರು ಒಪ್ಪಿಸಿದ್ದಾರೆ.