ಮೈಸೂರು: ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ದಾಳಿಯಿಂದ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಸಾವನ್ನಪ್ಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹುಲಿಗಳು ಕಾಡಿನಿಂದ ಹೊರಬಂದು ಏಕೆ ದಾಳಿ ಮಾಡುತ್ತವೆ, ಇದಕ್ಕೆ ಕಾರಣವೇನು, ಇದಕ್ಕೆ ಪರಿಹಾರವೇನು ಹಾಗೂ ಹುಲಿ ಸಂರಕ್ಷಿತ ಪ್ರದೇಶದ ನೀತಿ ನಿಯಮಗಳೇನು ಎಂಬ ಬಗ್ಗೆ ಫಾರೆಸ್ಟ್ ವಾರ್ಡನ್ ಆಗಿ ಕೆಲಸ ಮಾಡಿರುವ ವನ್ಯಜೀವಿ ತಜ್ಞರಾದ ಕೃತಿಕಾ ಆಲನಹಳ್ಳಿ ಈಟಿವಿ ಭಾರತ್ ಜೊತೆ ತಮ್ಮ ಸಂದರ್ಶನದಲ್ಲಿ ವಿವರಿಸಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪ್ರದೇಶ ಎಂಬ ಖ್ಯಾತಿ ಪಡೆದಿರುವ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕಾಡಂಚಿನ ಪ್ರದೇಶಗಳಲ್ಲಿ ಹುಲಿಗಳು ದಾಳಿ ಮಾಡಿ, ಸಾಕುಪ್ರಾಣಿಗಳು, ಹಲವಾರು ಜಾನುವಾರುಗಳನ್ನು ಕೊಂದು ಹಾಕಿವೆ. ಜತೆಗೆ ಜಾನುವಾರುಗಳನ್ನು ರಕ್ಷಿಸಲು ಹೋದ ಮನುಷ್ಯರ ಮೇಲೂ ಸಹ ದಾಳಿ ಮಾಡಿವೆ. ಬಂಡೀಪುರ ಹಾಗೂ ನಾಗರಹೊಳೆ ವ್ಯಾಪ್ತಿಯ ಮಡಿಕೇರಿ ಜಿಲ್ಲೆಯಲ್ಲೂ ಹುಲಿ ದಾಳಿಯಾಗಿದ್ದು, ಇದೇ ವರ್ಷ ಈ ಪ್ರದೇಶಗಳಲ್ಲಿ ಆರು ಜನ ಬಲಿಯಾಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಫಾರೆಸ್ಟ್ ವಾರ್ಡನ್ ಆಗಿ ಕೆಲಸ ನಿರ್ವಹಿಸಿರುವ ಕೃತಿಕಾ ಆಲನಹಳ್ಳಿ ವಿವರಿಸಿದ್ದಾರೆ.
ಹುಲಿ ಕಾಡಿನಿಂದ ಹೊರ ಬರಲು ಕಾರಣ:ಕಾಡಿನಲ್ಲಿ ಇರುವ ಹುಲಿಗಳು ಹೊರಗೆ ಬರಲು ಪ್ರಮುಖ ಕಾರಣ ಎಂದರೆ ಹುಲಿಗಳ ಸಂತತಿ ಹೆಚ್ಚಾಗಿರುವುದು, ಇದರಿಂದ ಹುಲಿಗಳು ತಮ್ಮ ಗಡಿಯನ್ನು ಗುರುತು ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ತಮ್ಮ ಗಡಿ ಗುರುತಿಸಿಕೊಳ್ಳಲು ಹುಲಿಗಳ ನಡುವೆ ಕದನವಾದಾಗ ಶಕ್ತಿಯುತ ಹುಲಿ ದುರ್ಬಲ ಹುಲಿಯನ್ನು ಹೊರಹಾಕುತ್ತದೆ. ಆಗ ಆಹಾರಕ್ಕಾಗಿ ಆ ಹುಲಿ ಕಾಡಿನಿಂದ ಹೊರ ಬಂದು ಆಹಾರ ಹುಡುಕಲು ಯತ್ನಿಸುತ್ತದೆ. ಆಗ ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ. ಎರಡನೇಯದಾಗಿ ವಯಸ್ಸಾದ ಹುಲಿ ಬೇಟೆಯಾಡಲು ಶಕ್ತಿ ಕಡಿಮೆ ಆದಾಗ ಸುಲಭವಾಗಿ ಸಿಗುವ ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತದೆ.
ಇದರ ಜೊತೆಗೆ ನವೆಂಬರ್ ನಿಂದ ಫೆಬ್ರವರಿವರೆಗೆ ಹುಲಿಗಳಿಗೆ ಸಂತಾನೋತ್ಪತ್ತಿ ಸಮಯವಾದ್ದರಿಂದ, ಅಗ ಶಕ್ತಿಯುತವಾದ ಹುಲಿ ನಿಶ್ಯಕ್ತ ಹುಲಿಯನ್ನು ಹೊರಹಾಕುತ್ತದೆ ಎನ್ನುತ್ತಾರೆ ಕೃತಿಕಾ ಆಲನಹಳ್ಳಿ.
ಪರಿಹಾರವೇನು:ಹುಲಿಗಳು ಹೆಚ್ಚಾದಂತೆ ಅದಕ್ಕೆ ಅದರದೇ ಆದ ಪ್ರದೇಶಬೇಕು, ಆದರೆ ಕಾಡಿನ ಪ್ರದೇಶದಲ್ಲೇ ಕೃಷಿ, ರೆಸಾರ್ಟ್, ಹೊಂಸ್ಟೇಗಳ ನಿರ್ಮಾಣ ಮಾಡಿಕೊಂಡು ಅವುಗಳ ಜಾಗವನ್ನು ಆಕ್ರಮಿಸಿಕೊಂಡಿದ್ದೇವೆ. ಆದ್ದರಿಂದ ಮಾನವ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇವುಗಳನ್ನು ನಿಯಂತ್ರಿಸಬೇಕಾಗಿದ್ದು, ಇದಕ್ಕಾಗಿ ಹುಲಿ ಸಂರಕ್ಷಿತ ಪ್ರದೇಶದ ಗೈಡ್ಲೈನ್ಸ್ಗಳನ್ನು ಅನುಸರಿಸಬೇಕು. ಇದರ ಜೊತೆಗೆ ಎನ್ಟಿಸಿಎ ಗೈಡ್ ಲೈನ್ಸ್ಗಳನ್ನು ಅನುಸರಿಸಬೇಕು.