ಮೈಸೂರು:ತಡರಾತ್ರಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಕಾವಲುಗಾರ ಮೃತಪಟ್ಟಿದ್ದಾರೆ. ಇದೇ ವೇಳೆ ಮತ್ತೊಬ್ಬರು ಪಾರಾಗಿದ್ದಾರೆ. ಮಹದೇವಸ್ವಾಮಿ (36) ಮೃತಪಟ್ಟವರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ಪ್ರದೇಶದ ಸೊಳ್ಳಾಪುರ ಬಳಿ ಶನಿವಾರ ಘಟನೆ ನಡೆದಿದೆ.
ಸುಮಾರು ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹಂಗಾಮಿ ವಾಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ ತಡರಾತ್ರಿ ಕಾವಲಿನಲ್ಲಿದ್ದಾಗ ಕಾಡಾನೆ ಇವರ ಮೇಲೆ ದಾಳಿ ನಡೆಸಿತು. ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಮಹದೇವಸ್ವಾಮಿ ಮೃತಪಟ್ಟರು. ಹಾಗೆಯೇ
ಸ್ಥಳದಲ್ಲಿದ್ದ ಮತ್ತೊಬ್ಬ ವಾಚರ್ ರಾಜೇಶ ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮಹದೇವಸ್ವಾಮಿ ಮೃತದೇಹವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಆವರಣದ ಮುಂಭಾಗದಲ್ಲಿ ಕುಟುಂಬದವರ ಆಕ್ರಂದನ ಮನಕಲಕುವಂತಿತ್ತು.
ಅತಿಯಾಗುತ್ತಿರುವ ಕಾಡಾನೆ ದಾಳಿ:ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ರೈತರು ಬೇಸತ್ತು ಹೋಗಿದ್ದಾರೆ. ಅರಣ್ಯ ಇಲಾಖೆ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದರೂ ಕೆಲವೊಮ್ಮೆ ದಾಳಿಯಿಂದ ಊರ ಜನರು ಸಾವಿಗೀಡಾಗಿರುವ ಉದಾಹರಣೆಯೂ ಇದೆ. ನಿನ್ನೆಯಷ್ಟೆ ಮೈಸೂರಿನಲ್ಲಿ ಮೂವರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಆಪರೇಶನ್ ಎಲಿಫೆಂಟ್ ಖ್ಯಾತಿಯ ಆನೆಗಳಿಂದ ಅರವಳಿಕೆ ಮದ್ದು ನೀಡುವ ಮೂಲಕ ಸೆರೆ ಹಿಡಿದಿದ್ದರು.
ಇದನ್ನೂ ಓದಿ:ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ₹15 ಲಕ್ಷ ಪರಿಹಾರ: ಸಚಿವ ಅಶೋಕ್