ಮೈಸೂರು:ಬಾಳೆ ಬೆಳೆ ಕಾಯಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿರುವ ಹಾಗೂ ಹತ್ತಿ ಬಿಡಿಸಲು ಹೋಗಿದ್ದ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಪ್ರತ್ಯೇಕ ಎರಡು ಘಟನೆಗಳು ಎಚ್ ಡಿ ಕೋಟೆ ತಾಲೂಕಿನ ಕುಂದೂರು ಹಾಗೂ ಕೆ ಆರ್ ಪುರ ಗ್ರಾಮಗಳ ಜಮೀನಿನಲ್ಲಿ ನಡೆದಿವೆ.
ಕಾಡಾನೆ ದಾಳಿಗೆ ರೈತ ಆಸ್ಪತ್ರೆಗೆ ದಾಖಲು :ತಮ್ಮ ಜಮೀನಿನಲ್ಲಿ ಬಾಳೆ ಕಾಯಲು ಹೋಗಿದ್ದ ಸಿದ್ದರಾಜನಾಯಕ ಎಂಬುವರ ಮೇಲೆ ಶುಕ್ರವಾರ ರಾತ್ರಿ ಕಾಡಾನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರೈತ ಪ್ರಜ್ಞಾಹೀನನಾಗಿ ಅಲ್ಲೇ ಬಿದ್ದಿದ್ದ. ಶನಿವಾರ ಬೆಳಗ್ಗೆ ಕುಟುಂಬದವರು ಜಮೀನಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬದವರು ಈತನನ್ನು ಎಚ್ ಡಿ ಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಿದ್ದರಾಜನಾಯಕ ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನ ಮಧ್ಯೆ ಇರುವ ಕುಂದೂರು ಗ್ರಾಮದ ನಿವಾಸಿ.
ಮಹಿಳೆ ಮೇಲೆ ಕಾಡು ಹಂದಿ ದಾಳಿ :ಜಮೀನಿನಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೋಗಿದ್ದ ಚಿಕ್ಕಮ್ಮ (55) ಎಂಬ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಘಟನೆ ಕೆ ಆರ್ ಪುರ ಹೊರವಲಯದ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕಾಡು ಹಂದಿ ದಾಳಿಗೆ ಸಿಲುಕಿ ನೆಲಕ್ಕೆ ಬಿದ್ದ ಪರಿಣಾಮ ಮಹಿಳೆಯ ಭುಜದ ಮೂಳೆ ಮುರಿದಿದೆ. ಅವರನ್ನು ಎಚ್ ಡಿ ಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಜೊತೆ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಇತರ ಕೂಲಿ ಕಾರ್ಮಿಕರು, ಕಾಡು ಹಂದಿ ದಾಳಿಯಿಂದ ಪಾರಾಗಿದ್ದಾರೆ.