ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಬೇಟೆಗಾರರನ್ನು ಬಂಧಿಸಲಾಗಿದ್ದು, ಉಳಿದ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ. ಪರಾರಿಯಾದವರ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಉದ್ಯಾನವನದಂಚಿನ ಲಕ್ಷ್ಮೀಪುರಂ ನಿವಾಸಿಗಳಾದ ಅಶೋಕ, ಕಾಟಿಚಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಏಳು ಆರೋಪಿಗಳಾದ ಮನು, ಬೊಮ್ಮ, ಭರತ್, ಆನಂದ್, ಶೇಷಮ್ಮನ ಜಯ, ರಾಮಕೃಷ್ಣೇಗೌಡ, ಮಂಜು ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ : ಅ.15ರ ರಾತ್ರಿ ಹುಣಸೂರು ಉದ್ಯಾನದ ವನ್ಯಜೀವಿ ವಲಯ ವ್ಯಾಪ್ತಿಯ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಕಾಡುಕೋಣ ಬೇಟೆಯಾಡಿ ನಾಲ್ಕು ತೊಡೆಗಳು ಹಾಗೂ ಮಾಂಸವನ್ನು ಹೊತ್ತೊಯ್ದಿದ್ದರು ಎನ್ನಲಾಗಿದ್ದು, ಈ ಸಂಬಂಧ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.