ಶ್ರೀನಿವಾಸ್ ಪ್ರಸಾದ್ ಮನೆಗೆ ಸೋಮಣ್ಣ ಭೇಟಿ ಮೈಸೂರು :ವರುಣಾ ಹಾಗೂ ಚಾಮರಾಜನಗರ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿರುವ ಸಚಿವ ವಿ. ಸೋಮಣ್ಣ ಮೊದಲ ಬಾರಿಗೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಗುರುವಾರ ಭೇಟಿ ನೀಡಿದ್ದರು. 'ಸೋಮವಾರ 17ರಂದು ನಾಮಪತ್ರ ಸಲ್ಲಿಸುತ್ತೇನೆ. ತಾವು ಬರಬೇಕು, ತಾವು ಬೆಂಬಲ ನೀಡಬೇಕು' ಎಂದು ಬೆಂಬಲ ಕೋರಿ, ಸುಮಾರು 1 ಗಂಟೆಗಳ ಕಾಲ ಇಬ್ಬರು ನಾಯಕರು ಗೌಪ್ಯ ಮಾತುಕತೆ ನಡೆಸಿದರು.
ಇದಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, "ಎರಡು ಕಡೆ ಸ್ಪರ್ಧೆ ಮಾಡಬೇಕೆಂದು ಹೈಕಮಾಂಡ್ ಆದೇಶಿಸಿದೆ. ಅವರ ಆದೇಶ ತಿರಸ್ಕಾರ ಮಾಡುವಂತಿಲ್ಲ ಎಂದು ಸೋಮಣ್ಣ ನನಗೆ ಹೇಳಿದರು. ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ" ಎಂದರು.
ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಅವರ ಪರವಾಗಿ ಜನ ಇದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "224 ಕ್ಷೇತ್ರಗಳಲ್ಲೂ ತೀರ್ಮಾನ ಮಾಡುವವರು ಮತದಾರರೇ. ಅವರ ಹೇಳಿಕೆಯಲ್ಲಿ ವಿಶೇಷತೆ ಏನೂ ಇಲ್ಲ" ಎಂದು ಹೇಳಿದರು.
ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆಯಲ್ಲಾ ಎಂಬ ಪ್ರಶ್ನೆಗೆ, "ಎಲ್ಲಾ ಪಕ್ಷಗಳಲ್ಲೂ ಭಿನ್ನಮತ, ಗೊಂದಲ ಇದ್ದೇ ಇರುತ್ತದೆ. ಅವುಗಳನ್ನು ಬಗೆಹರಿಸಿಕೊಂಡು ಮುಂದೆ ಹೋಗುವುದೇ ಚುನಾವಣೆ. ಚಾಮರಾಜನಗರದಲ್ಲಿ ಸೋಮಣ್ಣರಿಗೆ ಟಿಕೇಟ್ ನೀಡಿರುವುದನ್ನು ಸ್ಥಳಿಯರು ವಿರೋಧಿಸಿರುವುದು ಸರಿಯಿದೆ. ಆದರೆ ಸ್ಥಳೀಯರು ಟಿಕೇಟ್ ಕೇಳುವುದು ಬೇಡ ಎನ್ನಲು ಆಗುವುದಿಲ್ಲ. ಹೈಕಮಾಂಡ್ ಎಲ್ಲವನ್ನೂ ನೋಡಿ, ಅಳೆದು ತೂಗಿ ಸರ್ವೇ ಮಾಡಿ ಟಿಕೆಟ್ ನೀಡಿದ್ದಾರೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ" ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
"ನಾನು ರಾಜಕೀಯವಾಗಿ ಇನ್ನು ಮುಂದೆ ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಳೆದ ವರ್ಷವೇ ಹೇಳಿದ್ದು. ಅದರಂತೆ ಮುಂದಿನ ವರ್ಷಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷವಾಗುತ್ತಿದೆ. ಹಾಗಾಗಿ ಈ ಬಾರಿಯ ಚುನಾವಣೆಯೇ ನನ್ನ ಕೊನೆ ಚುನಾವಣೆ. ಮುಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಈ ಬಾರಿಯ ಚುನಾವಣಾ ಪ್ರಚಾರವೇ ನನ್ನ ಕೊನೆಯ ಚುನಾವಣಾ ಪ್ರಚಾರ" ಎಂದರು.
ಮೈಸೂರಿನ ಕೆ.ಆರ್.ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಲ್ಲಿ ಸ್ವಲ್ಪ ಗೊಂದಲವಿದೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆ ಆಗಲಿದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಇದನ್ನೂ ಓದಿ :ಪರಿವರ್ತನೆಗೆ ಬೇಸರ ಬೇಡ, ಟಿಕೆಟ್ ಕೈತಪ್ಪಿದವರಿಗೆ ಪಕ್ಷ ಬೇರೆ ಜವಾಬ್ದಾರಿ ನೀಡಲಿದೆ: ಅಣ್ಣಾಮಲೈ